ಈಗಾಗಲೇ ವಿರೇಂದ್ರ ಸೆಹ್ವಾಗ್, ಟಾಮ್ ಮೂಡಿ. ವೆಂಕಟೇಶ್ ಪ್ರಸಾದ್ ಸೇರಿದಂತೆ ಒಟ್ಟು 8 ಮಂದಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ(ಜು.03): ಭಾರತ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಇಂದು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಕೋಚ್ ಹುದ್ದೆಗೆ ಸೆಹ್ವಾಗ್ ಜೊತೆಗೆ ರೇಸ್'ನಲ್ಲಿ ಮುಂಚೂಣಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 9 ಕಡೆಯ ದಿನವಾಗಿದ್ದರೂ, 6 ದಿನ ಮುಂಚಿತವಾಗಿಯೇ ಶಾಸ್ತ್ರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಜುಲೈ 10ರಂದು ಅರ್ಜಿ ಸಲ್ಲಿಸಿದ ಸದಸ್ಯರ ಸಂದರ್ಶನವನ್ನು ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ನಡೆಸಲಿದೆ.

2014ರ ಆಗಸ್ಟ್‌'ನಿಂದ 2016ರ ಜೂನ್ ವರೆಗೂ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ರವಿಶಾಸ್ತ್ರಿ ತಂಡವನ್ನು ಯಶಸ್ಸಿನ ಪಥದಲ್ಲಿ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಆಟಗಾರರೊಂದಿಗೆ ಅದರಲ್ಲೂ ಪ್ರಮುಖವಾಗಿ ವಿರಾಟ್ ಕೊಹ್ಲಿಯಿಂದಿಗೆ ಶಾಸ್ತ್ರಿ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು.

ನೂತನ ಕೋಚ್ ಗುತ್ತಿಗೆ ಅವಧಿ 2019ರ ಏಕದಿನ ವಿಶ್ವಕಪ್'ವರೆಗೂ ಇರಲಿದ್ದು, ಸೂಕ್ತ ಕೋಚ್'ಯನ್ನು ನೇಮಿಸುವುದು ಬಿಸಿಸಿಐ ಹಾಗೂ ಕ್ರಿಕೆಟ್ ಸಲಹಾ ಸಮಿತಿಗೆ ಸವಾಲಿನ ಪ್ರಶ್ನೆಯಾಗಿದೆ.

ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಆಟಗಾರರು ರವಿಶಾಸ್ತ್ರಿಯೇ ಕೋಚ್ ಆಗಲಿ ಎನ್ನುವ ಇರಾದೆ ಹೊಂದಿದ್ದಾರೆ ಎಂದು ಬಿಸಿಸಿಐ ಆಪ್ತಮೂಲಗಳು ವರದಿ ಮಾಡಿವೆ.

ಈಗಾಗಲೇ ವಿರೇಂದ್ರ ಸೆಹ್ವಾಗ್, ಟಾಮ್ ಮೂಡಿ. ವೆಂಕಟೇಶ್ ಪ್ರಸಾದ್ ಸೇರಿದಂತೆ ಒಟ್ಟು 8 ಮಂದಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.