ಬೆಂಗಳೂರು[ಜ.24]: ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್ ಹಾಗೂ ಶ್ರೀನಿವಾಸ್ ಶರತ್ ಸಮಯೋಚಿತ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಮೊದಲ ದಿನದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 264 ರನ್ ಬಾರಿಸಿದೆ. ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾದ್ಕತ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಓವರ್’ನಲ್ಲೇ ಸೌರಾಷ್ಟ್ರ ಆತಿಥೇಯ ತಂಡಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. ಉನಾದ್ಕತ್ ಎಸೆದ ಮೂರನೇ ಎಸೆತದಲ್ಲೇ ಆರ್ ಸಮರ್ಥ್ ಎಲ್’ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಇನ್ನು ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡ ಕೂಡಿಕೊಂಡು ಮಿಂಚಿದ್ದ ಮಯಾಂಕ್ ಅಗರ್’ವಾಲ್ ಕೇವಲ 2 ರನ್ ಬಾರಿಸಿ ಉನಾದ್ಕತ್’ಗೆ ಎರಡನೇ ಬಲಿಯಾದರು. ಸಿದ್ಧಾರ್ಥ್ 12 ರನ್ ಸಿಡಿಸಿದರೆ, ಕರುಣ್ ನಾಯರ್ ಆಟ ಕೇವಲ 9 ರನ್’ಗಳಿಗೆ ಸೀಮಿತವಾಯಿತು. ತಂಡದ ಮೊತ್ತ 30 ರನ್’ಗಳಾಗುವಷ್ಟರಲ್ಲೇ ಕರ್ನಾಟಕದ ಪ್ರಮುಖ ನಾಲ್ವರು ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು.

ಆಸರೆಯಾದ ತ್ರಿಮೂರ್ತಿಗಳು: ಮೊದಲ 15 ಓವರ್’ಗಳಾಗುವಷ್ಟರಲ್ಲೇ ನಾಲ್ವರು ಬ್ಯಾಟ್ಸ್’ಮನ್’ಗಳು ಪೆವಲಿಯನ್ ಸೇರಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಜತೆಯಾದ ನಾಯಕ ಮನೀಶ್ ಪಾಂಡೆ ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ 106 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಕಳೆದ ಪಂದ್ಯದ ಹೀರೋ ಮನೀಶ್ ಪಾಂಡೆ ಅನಾಯಾಸವಾಗಿ ಬ್ಯಾಟ್ ಬೀಸಿದರು. ಕೇವಲ 67 ಎಸೆತಗಳನ್ನು ಎದುರಿಸಿದ ಪಾಂಡೆ 4 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 62 ರನ್ ಸಿಡಿಸಿ ಉನಾದ್ಕತ್’ಗೆ ನಾಲ್ಕನೇ ಬಲಿಯಾದರು. ಆ ಬಳಿಕ ಶ್ರೇಯಸ್ ಕೂಡಿಕೊಂಡ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಎಸ್. ಶರತ್ 96 ರನ್’ಗಳ ಜತೆಯಾಟ ನಿರ್ವಹಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಶತಕದತ್ತ ಮುನ್ನುಗ್ಗುತ್ತಿದ್ದ ಶ್ರೇಯಸ್ ಗೋಪಾಲ್ 87 ರನ್ ಬಾರಿಸಿ ಮಕ್ವಾನ ಬೌಲಿಂಗ್’ನಲ್ಲಿ ಕ್ಲೀನ್ ಬೌಲ್ಡ್ ಆದರು. ಬರೋಬ್ಬರಿ 182 ಎಸೆತಗಳನ್ನು ಎದುರಿಸಿದ ಶ್ರೇಯಸ್ ವಿಕೆಟ್ ಒಪ್ಪಿಸುವ ಮುನ್ನ 9 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಸಿಡಿಸಿದರು. ಶರತ್ ಕೂಡಾ ಉತ್ತಮ ಬ್ಯಾಟಿಂಗ್ ನಡೆಸಿದ್ದು, 177 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ನೆರವಿನಿಂದ 74 ರನ್ ಬಾರಿಸಿದ್ದಾರೆ. 

ದಿಢೀರ್ ಕುಸಿದ ಬಾಲಂಗೋಚಿಗಳು: ಆರಂಭದ ಆಘಾತದ ನಂತರ ಚೇತರಿಸಿಕೊಂಡಿದ್ದ ಕರ್ನಾಟಕ ಶ್ರೇಯಸ್ ವಿಕೆಟ್ ಒಪ್ಪಿಸುವ ಮುನ್ನ 5 ವಿಕೆಟ್ ನಷ್ಟಕ್ಕೆ 230 ರನ್ ಬಾರಿಸಿ ಸುಭದ್ರ ಸ್ಥಿತಿಯತ್ತ ಸಾಗುತ್ತಿತ್ತು. ಆದರೆ ಶ್ರೇಯಸ್ ವಿಕೆಟ್ ಬೀಳುತ್ತಿದ್ದಂತೆ ದಿಢೀರ್ ಕುಸಿದ ಕರ್ನಾಟಕ ತನ್ನ ಖಾತೆಗೆ 26 ರನ್ ಸೇರಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಕೆ. ಗೌತಮ್[2], ವಿನಯ್ ಕುಮಾರ್[8] ಹಾಗೂ ಅಭಿಮನ್ಯು ಮಿಥುನ್[4] ಎರಡಂಕಿ ಮೊತ್ತ ಮುಟ್ಟಲು ವಿಫಲವಾದರು. ಎರಡನೇ ದಿನಕ್ಕೆ ಶರತ್ 74 ಹಾಗೂ ರೋನಿತ್ ಮೋರೆ 0* ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.