ಗೆಲುವಿಗೆ 362 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿರುವ ರೈಲ್ವೇಸ್, 3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದ್ದು ಇನ್ನೂ 318 ರನ್‌ಗಳ ಅವಶ್ಯಕತೆ ಇದೆ. ಆರಂಭಿಕ ಪ್ರಶಾಂತ್ ಗುಪ್ತಾ(04)ಗೆ ಪ್ರಸಿದ್ಧ್ ಕೃಷ್ಣ ಪೆವಿಲಿಯನ್ ದಾರಿ ತೋರಿಸಿದರು.
ಶಿವಮೊಗ್ಗ(ಡಿ.25): 2018-19ರ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್‌ಗೇರುವ ಕರ್ನಾಟಕದ ಕನಸು ಜೀವಂತವಾಗಿ ಉಳಿಯುವ ಭರವಸೆ ಮೂಡಿದೆ. ರೈಲ್ವೇಸ್ ವಿರುದ್ಧ ತಂಡಕ್ಕೆ ಗೆಲ್ಲಲು ಕೇವಲ 9 ವಿಕೆಟ್‌ಗಳ ಅಗತ್ಯವಿದ್ದು, ಪಂದ್ಯದ ಅಂತಿಮ ದಿನವಾದ ಮಂಗಳವಾರ ಗೆಲುವಿನ ನಗೆ ಬೀರಲು ಕಾತರಿಸುತ್ತಿದೆ.
ಗೆಲುವಿಗೆ 362 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿರುವ ರೈಲ್ವೇಸ್, 3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದ್ದು ಇನ್ನೂ 318 ರನ್‌ಗಳ ಅವಶ್ಯಕತೆ ಇದೆ. ಆರಂಭಿಕ ಪ್ರಶಾಂತ್ ಗುಪ್ತಾ(04)ಗೆ ಪ್ರಸಿದ್ಧ್ ಕೃಷ್ಣ ಪೆವಿಲಿಯನ್ ದಾರಿ ತೋರಿಸಿದರು. ಸೌರಭ್ ವಕಾಸ್ಕರ್ (20) ಹಾಗೂ ನಿತಿನ್ ಭಿಲ್ಲೆ (16) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಅತ್ಯುತ್ತಮ ಆರಂಭ: ಇದಕ್ಕೂ ಮುನ್ನ ವಿಕೆಟ್ ನಷ್ಟವಿಲ್ಲದೆ 41 ರನ್‌ಗಳಿಂದ 3ನೇ ದಿನವನ್ನು ಆರಂಭಿಸಿದ ಕರ್ನಾಟಕಕ್ಕೆ ಡಿ.ನಿಶ್ಚಲ್ ಹಾಗೂ ದೇವದತ್ ಪಡಿಕ್ಕಲ್ ಆಸರೆಯಾದರು. ಇವರಿಬ್ಬರ ಅಮೋಘ ಜೊತೆಯಾಟಕ್ಕೆ ರೈಲ್ವೇಸ್ ಬೌಲರ್‌ಗಳು ತಬ್ಬಿಬ್ಬಾದರು. ಮೊದಲ ವಿಕೆಟ್‌ಗೆ 150 ರನ್ ಸೇರಿಸಿದ ಯುವ ಜೋಡಿ, ರಾಜ್ಯ ತಂಡ ದೊಡ್ಡ ಮೊತ್ತದತ್ತ ಹೆಜ್ಜೆ ಹಾಕಲು ನೆರವಾದರು. 159 ಎಸೆತಗಳನ್ನು ಎದುರಿಸಿದ ದೇವದತ್ 5 ಬೌಂಡರಿ, 1 ಸಿಕ್ಸರ್‌ನೊಂದಿಗೆ 75 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಕ್ರೀಸ್‌ಗೆ ಕಚ್ಚಿನಿಂತು ಎದುರಾಳಿಗಳ ತಾಳ್ಮೆ ಪರೀಕ್ಷಿಸಿದ ನಿಶ್ಚಲ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3ನೇ ಶತಕ ಬಾರಿಸಿದರು. ಈ ಋುತುವಿನಲ್ಲಿ ಇದು ಅವರ 2ನೇ ಶತಕ. 232 ಎಸೆತಗಳನ್ನು ಎದುರಿಸಿದ ನಿಶ್ಚಲ್, 7 ಬೌಂಡರಿಗಳೊಂದಿಗೆ 101 ರನ್ ದಾಖಲಿಸಿದರು. 2ನೇ ವಿಕೆಟ್‌ಗೆ ನಿಶ್ಚಲ್ ಹಾಗೂ ಕೆ.ವಿ.ಸಿದ್ಧಾರ್ಥ್ ನಡುವೆ 94 ರನ್‌ಗಳ ಜೊತೆಯಾಟ ಮೂಡಿಬಂತು. ವೇಗವಾಗಿ ಬ್ಯಾಟ್ ಬೀಸಿದ ಸಿದ್ಧಾರ್ಥ್ 86 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಜೇಯ 84 ರನ್ ಕಲೆಹಾಕಿದರು. ಈ ಋುತುವಿನಲ್ಲಿ 2ನೇ ಶತಕ ದಾಖಲಿಸುವ ವಿಶ್ವಾಸದಲ್ಲಿದ್ದ ಸಿದ್ಧಾರ್ಥ್’ಗೆ ಅವಕಾಶ ಸಿಗಲಿಲ್ಲ. ತಂಡ ದಿನದಾಟ 15ಕ್ಕೂ ಹೆಚ್ಚು ಓವರ್ ಬಾಕಿ ಇರುವಾಗಲೇ ಡಿಕ್ಲೇರ್ ಮಾಡಿಕೊಳ್ಳಲು ನಿರ್ಧರಿಸಿತು. 2ನೇ ಇನ್ನಿಂಗ್ಸ್‌ನಲ್ಲಿ 84 ಓವರ್ ಬ್ಯಾಟ್ ಮಾಡಿದ ಕರ್ನಾಟಕ 2 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಮನೀಶ್ ಪಾಂಡೆ 18 ರನ್‌ಗಳಿಸಿ ಅಜೇಯರಾಗಿ ಉಳಿದರು. ರೈಲ್ವೇಸ್ ಪರ ಹಷ್‌ರ್ ತ್ಯಾಗಿಗೆ 2 ವಿಕೆಟ್ ದೊರೆಯಿತು.
‘ಎ’ ಗುಂಪಿನಲ್ಲಿರುವ ಕರ್ನಾಟಕ 5 ಪಂದ್ಯಗಳಲ್ಲಿ 1 ಗೆಲುವು, 1 ಸೋಲು, 3 ಡ್ರಾ ಸಾಧಿಸಿದೆ. ಈ ಪಂದ್ಯದಲ್ಲಿನ ಗೆಲುವು ರಾಜ್ಯ ತಂಡಕ್ಕೆ ಅಂಕಪಟ್ಟಿಯಲ್ಲಿ ಮೇಲೇಳಲು ನೆರವಾಗಲಿದೆ.
ಸ್ಕೋರ್:
ಕರ್ನಾಟಕ 216 ಹಾಗೂ 290/2 ಡಿ.,
ರೈಲ್ವೇಸ್ 143 ಹಾಗೂ 44/1
(* ಸಾಂದರ್ಭಿಕ ಚಿತ್ರ ಬಳಸಲಾಗಿದೆ]
