ನಾಗ್ಪುರ(ಫೆ.06): ಉಮೇಶ್‌ ಯಾದವ್‌ ಮಾರಕ ದಾಳಿಗೆ ಎದೆಯೊಡ್ಡಿ ನಿಂತ ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳು 2018-19ರ ರಣಜಿ ಟ್ರೋಫಿ ಫೈನಲ್‌ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದ್ದಾರೆ. 5 ವಿಕೆಟ್‌ ನಷ್ಟಕ್ಕೆ 158 ರನ್‌ಗಳಿಂದ 3ನೇ ದಿನದಾಟವನ್ನು ಆರಂಭಿಸಿದ ಸೌರಾಷ್ಟ್ರ, ಸ್ನೆಲ್‌ ಪಟೇಲ್‌(102) ಶತಕ ಹಾಗೂ ಕೆಳ ಕ್ರಮಾಂಕದ ಹೋರಾಟದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್‌ ಗಳಿಸಿತು. 
ಕೇವಲ 5 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಹಾಲಿ ಚಾಂಪಿಯನ್‌ ವಿದರ್ಭ, 3ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 55 ರನ್‌ ಗಳಿಸಿದ್ದು, ಒಟ್ಟಾರೆ 60 ರನ್‌ ಮುನ್ನಡೆ ಪಡೆದಿದೆ. ಕನ್ನಡಿಗ ಗಣೇಶ್‌ ಸತೀಶ್‌ (24), ರನ್‌ ಮಷಿನ್‌ ವಾಸೀಂ ಜಾಫರ್‌ (05) ಕ್ರೀಸ್‌ ಕಾಯ್ದುಕೊಂಡಿದ್ದು ವಿದರ್ಭ ಪಾಲಿಗೆ ಇವರಿಬ್ಬರ ಜೊತೆಯಾಟ ಮಹತ್ವದೆನಿಸಿದೆ.

ಇದಕ್ಕೂ ಮುನ್ನ ಸ್ನೆಲ್‌ ಪಟೇಲ್‌ ಈ ಋುತುವಿನ ಮೊದಲ ಶತಕ ಬಾರಿಸಿ ಸೌರಾಷ್ಟ್ರ ಹೋರಾಟಕ್ಕೆ ಮುನ್ನುಡಿ ಬರೆದರು. ಉಮೇಶ್‌ಗೆ ವಿಕೆಟ್‌ ನೀಡಿ ಪಟೇಲ್‌ ಪೆವಿಲಿಯನ್‌ ಸೇರಿದಾಗ ಸೌರಾಷ್ಟ್ರಕ್ಕೆ ಇನ್ನೂ 128 ರನ್‌ಗಳ ಅಗತ್ಯವಿತ್ತು. ಆಲ್ರೌಂಡರ್ ಪ್ರೇರಕ್‌ ಮಂಕಡ್‌ (21) ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಬೌಲರ್‌ಗಳಾದ ಕಮ್ಲೇಶ್‌ ಮಕವಾನ (27), ಧರ್ಮೇಂದ್ರ ಜಡೇಜಾ (23), ಜಯದೇವ್‌ ಉನಾದ್ಕತ್‌ (46) ಹಾಗೂ ಚೇತನ್‌ ಸಕಾರಿಯಾ (ಅಜೇಯ 28) ರನ್‌ ಗಳಿಸಿ ತಂಡವನ್ನು 300 ರನ್‌ ಗಡಿ ದಾಟಿಸಿದರು. ವಿದರ್ಭ ಪರ ಆದಿತ್ಯ ಸರ್ವಾಟೆ 5 ಹಾಗೂ ಅಕ್ಷಯ್‌ ವಾಖರೆ 4 ವಿಕೆಟ್‌ ಕಿತ್ತರು. 4ನೇ ದಿನವಾದ ಬುಧವಾರದ ಮೊದಲ ಅವಧಿ ಉಭಯ ತಂಡಗಳಿಗೆ ನಿರ್ಣಾಯಕವೆನಿಸಿದೆ.

ಸ್ಕೋರ್‌: ವಿದರ್ಭ 312 ಹಾಗೂ 55/2, ಸೌರಾಷ್ಟ್ರ 307