ಸೂರತ್‌[ಡಿ.14]: 2018-19ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ, ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದ್ದು ಇಂದಿನಿಂದ ಇಲ್ಲಿ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಸೆಣಸಲಿದೆ. 

ಕಳೆದ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೋಲುಂಡಿದ್ದ ಕರ್ನಾಟಕಕ್ಕೆ, ಈ ಪಂದ್ಯದಲ್ಲಿ ರನ್‌ ಮಷಿನ್‌ ಮಯಾಂಕ್‌ ಅಗರ್‌ವಾಲ್‌ ಹಾಗೂ ತಾರಾ ಆಲ್ರೌಂಡರ್‌ ಕೆ.ಗೌತಮ್‌ ಸೇವೆ ಲಭ್ಯವಾಗಲಿದೆ. ಗುರುವಾರ ಬೆಳಗ್ಗೆಯಷ್ಟೇ ನ್ಯೂಜಿಲೆಂಡ್‌ನಿಂದ ವಾಪಸಾದ ಈ ಇಬ್ಬರು, ತಂಡ ಕೂಡಿಕೊಂಡಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಆಡಿದ್ದ ಕರುಣ್‌ ನಾಯರ್‌, ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ.

4 ಪಂದ್ಯಗಳಲ್ಲಿ 1 ಗೆಲುವು, 1 ಸೋಲು, 2 ಡ್ರಾಗಳೊಂದಿಗೆ ಕರ್ನಾಟಕ (12 ಅಂಕ) ‘ಎ’ ಗುಂಪಿನಲ್ಲಿ 5ನೇ ಸ್ಥಾನದಲ್ಲಿದೆ. 5 ಪಂದ್ಯಗಳನ್ನು ಆಡಿರುವ ಗುಜರಾತ್‌ 2 ಗೆಲುವು, 3 ಡ್ರಾಗಳೊಂದಿಗೆ 17 ಅಂಕ ಪಡೆದು 2ನೇ ಸ್ಥಾನ ಪಡೆದಿದೆ. ‘ಎ’ ಹಾಗೂ ‘ಬಿ’ ಗುಂಪಿನಿಂದ ಒಟ್ಟು 5 ಅಗ್ರ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆಯಲಿವೆ. ಹೀಗಾಗಿ ರಾಜ್ಯ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದಾಗಿದೆ.

ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದ್ದು, ಶ್ರೇಯಸ್‌, ಸುಚಿತ್‌ ಹಾಗೂ ಗೌತಮ್‌ ಪ್ರಮುಖ ಪಾತ್ರ ವಹಿಸಲಿದ್ದಾರೆ. ಗುಜರಾತ್‌ಗೆ ಕಾಯಂ ನಾಯಕ ಪಾರ್ಥೀವ್‌ ಪಟೇಲ್‌ ಸೇವೆ ಅಲಭ್ಯವಾಗಲಿದ್ದು, ಪ್ರಿಯಾಂಕ್‌ ಪಾಂಚಾಲ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ತಂಡ: ವಿನಯ್‌ ಕುಮಾರ್‌ (ನಾಯಕ), ಶ್ರೇಯಸ್‌ ಗೋಪಾಲ್‌, ನಿಶ್ಚಲ್‌ ಡಿ., ಸಿದ್ಧಾಥ್‌ರ್‍ ಕೆ.ವಿ, ಆರ್‌.ಸಮಥ್‌ರ್‍, ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌, ಶರತ್‌ ಬಿ.ಆರ್‌, ಜೆ.ಸುಚಿತ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಪವನ್‌ ದೇಶಪಾಂಡೆ, ಶರತ್‌ ಶ್ರೀನಿವಾಸ್‌, ಕೆ.ಗೌತಮ್‌, ಪ್ರತೀಕ್‌ ಜೈನ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಹಾಟ್‌ಸ್ಟಾರ್‌