ಮೊದಲ ಸೆಟ್‌'ನಲ್ಲಿ ಸುಲಭ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದ ರಾಮ್‌'ಕುಮಾರ್, ಭಾರೀ ರೋಚಕತೆಯಿಂದ ಕೂಡಿದ್ದ ದ್ವಿತೀಯ ಸೆಟ್ ಅನ್ನು ಕೈಚೆಲ್ಲಿದರು.

ಬೆಂಗಳೂರು(ಏ.07): ಯುವ ಆಟಗಾರ ರಾಮ್‌'ಕುಮಾರ್ ರಾಮನಾಥನ್ ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್ ಕಪ್ ಏಷ್ಯಾ/ಒಷೇನಿಯಾ ಗುಂಪ 1ರ ಪಂದ್ಯದ ಮೊದಲ ಹಣಾಹಣಿಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದಾರೆ.

ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಆವರಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೈಮುರ್ ಇಸ್ಮಾಯಿಲೊವ್ ವಿರುದ್ಧದ ಮೊದಲ ಸಿಂಗಲ್ಸ್ ಹಣಾಹಣಿಯಲ್ಲಿ ಮೂರೂವರೆ ಗಂಟೆ ಸೆಣಸಾಡಿದ ಅವರು, 6-2, 5-7, 6-2, 7-5 ಸೆಟ್‌'ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ತಂಡ ಶುಭಾರಂಭ ಮಾಡಲು ಕಾರಣರಾದರು. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಫೆಬ್ರವರಿಯಲ್ಲಿ ಎರಡೂ ಪಂದ್ಯ ಗೆದ್ದಿದ್ದ ರಾಮ್ ಕುಮಾರ್ ಹ್ಯಾಟ್ರಿಕ್ ಗೆಲುವು ಸಾಧಿಸಿದರು.

ಮೊದಲ ಸೆಟ್‌'ನಲ್ಲಿ ಸುಲಭ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದ ರಾಮ್‌'ಕುಮಾರ್, ಭಾರೀ ರೋಚಕತೆಯಿಂದ ಕೂಡಿದ್ದ ದ್ವಿತೀಯ ಸೆಟ್ ಅನ್ನು ಕೈಚೆಲ್ಲಿದರು. ಆದರೆ ಪಂದ್ಯದಲ್ಲಿ ಪುನಃ ಹಿಡಿದ ಸಾಧಿಸುವಲ್ಲಿ ಯಶಸ್ವಿಯಾದ ಭಾರತೀಯ ಆಟಗಾರ, ಅತ್ಯಮೋಘ ಆಟದ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡರು.