60 ಮಂದಿಗೆ ಕ್ರೀಡಾ ಪ್ರಶಸ್ತಿ ಪ್ರದಾನ | ರಾಣಿ ರಾಂಪಾಲ್‌, ಮರಿಯಪ್ಪನ್‌ ತಂಗವೇಲುಗೆ ರಾಜೀವ್‌ ಖೇಲ್‌ ರತ್ನ ಪ್ರದಾನ | ರೋಹಿತ್‌, ಇಶಾಂತ್‌ ಗೈರು | ಕೊರೋನಾ: ಪೋಗಾಟ್‌, ರಂಕಿರೆಡ್ಡಿಗೆ ಪ್ರದಾನ ಇಲ್ಲ

ಬೆಂಗಳೂರು (ಆ. 30):  ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಹಾಗೂ ಪ್ಯಾರಾ ಅಥ್ಲೀಟ್‌ ಮರಿಯಪ್ಪನ್‌ ತಂಗವೇಲು ಅವರಿಗೆ ಶನಿವಾರ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರದಾನ ಮಾಡಲಾಯಿತು.

ಕೊರೋನಾದಿಂದಾಗಿ ಇದೇ ಮೊದಲ ಬಾರಿಗೆ ಆಯಾ ರಾಜ್ಯದಲ್ಲಿ ನಡೆದ ವರ್ಚುವಲ್‌ ಪ್ರಶಸ್ತಿ ಸಮಾರಂಭದಲ್ಲಿ 60 ಕ್ರೀಡಾ ಸಾಧಕರು ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಆನ್‌ಲೈನ್‌ನಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ವಿತರಿಸಿದರು. ವಿವಿಧ ರಾಜ್ಯದ 11 ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರ ಮತ್ತು ಬೆಂಗಳೂರಿನ ವಿಕಾಸ ಸೌಧದ ಎನ್‌ಐಸಿ ಸ್ಟುಡಿಯೋದಲ್ಲಿ ಕಾರ‍್ಯಕ್ರಮ ಆಯೋಜಿಸಲಾಗಿತ್ತು.

ಬೆಂಗಳೂರಿನಲ್ಲಿ ಒಟ್ಟು 7 ಕ್ರೀಡಾ ಸಾಧಕರು ಪ್ರಶಸ್ತಿ ಸ್ವೀಕರಿಸಿದರು. ಹಾಕಿ ಆಟಗಾರ ಆಕಾಶ್‌ದೀಪ್‌ ಸಿಂಗ್‌ ಅರ್ಜುನ ಪ್ರಶಸ್ತಿ ಪಡೆದರೆ, ಮಹಿಳಾ ಅಥ್ಲಿಟ್‌ ಜಿನ್ಸಿ ಫಿಲಿಫ್ಸ್‌, ಪ್ಯಾರಾ ಅಥ್ಲೆಟಿಕ್ಸ್‌ ಕೋಚ್‌ ಜೆ.ರಂಜಿತ್‌ ಕುಮಾರ್‌ ಹಾಗೂ ಬ್ಯಾಡ್ಮಿಂಟನ್‌ ಆಟಗಾರ್ತಿ ತೃಪ್ತಿ ಮುರಗುಂಡೆ ಧ್ಯಾನ್‌ಚಂದ್‌ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯದ ಮೂವರು ಕ್ರೀಡಾ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಕಿ ಕೋಚ್‌ ಜ್ಯೂಡ್‌ ಫೆಲಿಕ್ಸ್‌ ದ್ರೋಣಾಚಾರ‍್ಯ ಪ್ರಶಸ್ತಿ ಪಡೆದರು. ರಾಜ್ಯದ ಹಿರಿಯ ಅಥ್ಲೆಟಿಕ್ಸ್‌ ಕೋಚ್‌ ಪುರುಷೋತ್ತಮ್‌ ರೈ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದರು.

ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ: ಪ್ರಶಸ್ತಿಗಳ ನಗದು ಮೊತ್ತ ಗಣನೀಯ ಹೆಚ್ಚಳ

ಉಳಿದಂತೆ ಕ್ರಿಕೆಟಿಗ ರೋಹಿತ್‌ ಶರ್ಮಾ, ಇಶಾಂತ್‌ ಶರ್ಮಾ ಐಪಿಎಲ್‌ ಕಾರಣದಿಂದ ಗೈರಾಗಿದ್ದರೆ, ಕುಸ್ತಿಪಟು ವಿನೇಶ್‌ ಫೋಗಾಟ್‌, ಶಟ್ಲರ್‌ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಕೊರೋನಾ ಸೋಂಕಿನಿಂದ ಕಾರ‍್ಯಕ್ರಮದಿಂದ ದೂರ ಉಳಿದಿದ್ದರು. ಗಾಲ್‌್ಫ ಆಟಗಾರ್ತಿ ಕರ್ನಾಟಕದ ಅದಿತಿ ಅಶೋಕ್‌, ಮಾಜಿ ಫುಟ್ಬಾಲ್‌ ಆಟಗಾರ ಸುಖ್ವಿಂದರ್‌ ಸಿಂಗ್‌ ವಿದೇಶದಲ್ಲಿರುವ ಕಾರಣದಿಂದ ಕಾರ‍್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ.

ಪ್ರಶಸ್ತಿ ಮೊತ್ತ ಹೆಚ್ಚಳ:

ಈ ಬಾರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದೆ. ರಾಜೀವ್‌ ಗಾಂಧಿ ಖೇಲ್‌ ರತ್ನ ವಿಜೇತರಿಗೆ .25 ಲಕ್ಷ, ಅರ್ಜುನ ಪ್ರಶಸ್ತಿ ವಿಜೇತರಿಗೆ .15 ಲಕ್ಷ, ದ್ರೋಣಾಚಾರ‍್ಯ ವಿಜೇತರಿಗೆ .15 ಲಕ್ಷ, ಧ್ಯಾನ್‌ಚಂದ್‌ ಪ್ರಶಸ್ತಿ ಮೊತ್ತವನ್ನು 10 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿದೆ.