ದೆಹಲಿ(ಜು.02): ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಆಪ್ ಅದಾಲತ್ ಖ್ಯಾತಿಯ ರಜತ್ ಶರ್ಮಾ ಆಯ್ಕೆಯಾಗಿದ್ದಾರೆ. ಡಿಡಿಸಿಎ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಜತ್ ಶರ್ಮಾ 517 ಮತಗಳ ಅಂತರದಲ್ಲಿ 1983ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಮದನ್ ಲಾಲ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

 

 

ಡಿಡಿಸಿಎ ಚುನಾವಣೆಯಲ್ಲಿ ರಜತ್ ಶರ್ಮಾ ತಂಡ ಎಲ್ಲಾ 12 ಸ್ಥಾನಗಳನ್ನ ಗೆಲ್ಲೋ ಮೂಲಕ ದಾಖಲೆ ಬರೆದಿದ್ದಾರೆ. ರಜತ್ ಶರ್ಮಾ 1531 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದರೆ, ಮದನ್ ಲಾಲ್ 1004 ಮತಗಳನ್ನ ಪಡೆದು ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಸೋಲು ಅನುಭವಿಸಿದರು. 

ರಜತ್ ಶರ್ಮಾ ಗೆಲುವು ಪ್ರಸಕ್ತ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿಕೆ ಖನ್ನ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಡಿಡಿಸಿಎ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿಕೆ ಖನ್ನಾ ಪತ್ನಿ ಶಶಿ ಎದುರಾಳಿ ರಾಕೇಶ್ ಬನ್ಸಾಲ್ ವಿರುದ್ಧ ಸೋಲು ಅನುಭವಿಸಿದ್ದಾರೆ.  

ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಜತ್ ಶರ್ಮಾ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಭ್ರಷ್ಟಾಚಾರ, ಹಗರಣ, ನ್ಯಾಯಾಲಯದ ಆದೇಶ ಪಾಲನೆ, ಕಾನೂನು ಹೋರಾಟ ಸೇರಿದಂತೆ ಹಲವು ಅಡೆತಡೆಗಳು ಶರ್ಮಾ ಮುಂದಿವೆ. ಇವೆಲ್ಲವನ್ನ ರಜತ್ ಶರ್ಮಾ ಹೇಗೆ ನಿಭಾಯಿಸುತ್ತಾರೆ ಅನ್ನೋದೇ ಸದ್ಯಕ್ಕಿರುವ ಕುತೂಹಲ.