ಈ ಗುರಿಯನ್ನು ಬೆನ್ನತ್ತಿದ್ದ ಗುಜರಾತ್ ಲಯನ್ಸ್​ 18.2 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಜಯ ಸಾಧಿಸಿತು. ಸುರೇಶ್ ರೈನಾ ಭರ್ಜರಿ ಅರ್ಧಶತಕ(84) ಬಾರಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಾಯಕ ಸುರೇಶ್‌ ರೈನಾ (84: 46 ಎಸೆತ, 9 ಬೌಂಡರಿ, 4 ಸಿಕ್ಸರ್‌) ಹೋರಾಟದ ಫಲವಾಗಿ ಗುಜರಾತ್‌ ಲಯನ್ಸ್‌ ಸೋಲಿನ ಸುಳಿಯಿಂದ ಮೇಲೆದ್ದಿದೆ. ಭಾರತದ ಕ್ರಿಕೆಟ್‌ ಕಾಶಿ ಈಡನ್‌ ಗಾರ್ಡನ್‌ನಲ್ಲಿ ಕೋಲ್ಕತಾ ನೈಟ್‌ರೈಡ​ರ್‍ಸ್ ನೀಡಿದ್ದ 188 ರನ್‌ ಗೆಲುವಿನ ಗುರಿಯನ್ನು ಲಯನ್ಸ್‌ ಇನ್ನೂ 10 ಎಸೆತ ಬಾಕಿ ಇರುವಂತೆಯೇ ಬೆನ್ನತ್ತಿ 4 ವಿಕೆಟ್‌ಗಳ ಗೆಲುವು ಸಾಧಿಸಿತು. ಆರೋನ್‌ ಫಿಂಚ್‌ (31: 15 ಎಸೆತ, 4 ಬೌಂಡರಿ, 2 ಸಿಕ್ಸರ್‌) ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 5 ಓವರ್‌ಗಳ ಆಟ ಮುಕ್ತಾಯಗೊಂಡಿದ್ದಾಗ ಮಳೆ ಬಿದ್ದ ಕಾರಣ ಪಂದ್ಯ ಕೆಲ ಹೊತ್ತು ಸ್ಥಗಿತಗೊಂಡಿತ್ತು. ಆದರೆ ಪಂದ್ಯ ಪುನರಾರಂಭವಾದ ಬಳಿಕ ರೈನಾ ತಮ್ಮ ನೈಜ ಆಟಕ್ಕಿಳಿದರು. ಅವರಿಗೆ ಮೆಕ್ಕಲಂ (33) ಉತ್ತಮ ಸಾಥ್‌ ನೀಡಿದರು. ರೈನಾ ವಿಕೆಟ್‌ ಪತನಗೊಳ್ಳುವಷ್ಟರಲ್ಲಿ ಪಂದ್ಯ ಸಂಪೂರ್ಣವಾಗಿ ಲಯನ್ಸ್‌ ಹಿಡಿತದಲ್ಲಿತ್ತು. ಗುಜರಾತ್‌ ನಾಯಕನಿಗಿದು ಐಪಿಎಲ್‌ನಲ್ಲಿ 30ನೇ ಅರ್ಧಶತಕ. ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಜೇಮ್ಸ್‌ ಫೌಕ್ನರ್‌ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಗೆಲುವಿನೊಂದಿಗೆ ಗುಜರಾತ್‌ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ. ಪುಣೆ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತಾ ನೈಟ್‌ರೈಡ​ರ್‍ಸ್ ಸುನಿಲ್‌ ನರೇನ್‌ (42: 17 ಎಸೆತ, 9 ಬೌಂಡರಿ, 1 ಸಿಕ್ಸರ್‌) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಅಮೋಘ ಆರಂಭ ಪಡೆದುಕೊಂಡಿತು. ನಾಯಕ ಗಂಭೀರ್‌ ಸಹ (33) ಸಮಯೋಚಿತ ಆಟವಾಡಿದರು. ಆದರೆ ಕರ್ನಾಟಕದ ರಾಬಿನ್‌ ಉತ್ತಪ್ಪ (72: 48 ಎಸೆತ, 8 ಬೌಂಡರಿ, 2 ಸಿಕ್ಸರ್‌) ಆಕರ್ಷಕ ಅರ್ಧಶತಕದ ನೆರವಿನಿಂದ ಕೆಕೆಆರ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತು. ಕೆಕೆಆರ್‌ ಪರ 50ನೇ ಪಂದ್ಯವಾಡಿದ ಉತ್ತಪ್ಪ, ಈ ಆವೃತ್ತಿಯಲ್ಲಿ 2ನೇ ಹಾಗೂ ಐಪಿಎಲ್‌ನಲ್ಲಿ ಒಟ್ಟಾರೆ 19ನೇ ಅರ್ಧಶತಕ ಪೂರೈಸಿದರು.

ಸ್ಕೋರ್

ಕೋಲ್ಲತ್ತಾ ನೈಟ್ ರೈಡರ್ಸ್ : 187/5 (20/20 )

ಗುಜರಾತ್ ಲಯನ್ಸ್: 188/6 (18.2/20 )

ಪಂದ್ಯ ಶ್ರೇಷ್ಠ: ಸುರೇಶ್ ರೈನಾ