ಭವಿಷ್ಯದಲ್ಲಿ ಈ ಪ್ರತಿಭೆ ಭಾರತದ ಭರವಸೆಯ ಆಲ್'ರೌಂಡರ್ ಆಗಬಲ್ಲರೇ? ಕಾದು ನೋಡಬೇಕು.
ಮುಂಬೈ: ಸ್ಥಳೀಯ ಟೂರ್ನಿಯ ಪಂದ್ಯವೊಂದರಲ್ಲಿ ಸಾಗರ್ ಮಿಶ್ರಾ ಸಿಕ್ಸರ್'ಗಳ ಸುರಿಮಳೆಗೈದಿದ್ದಾರೆ. 23 ವರ್ಷದ ರೈಲ್ವೇಸ್ ಕ್ರಿಕೆಟಿಗ ಸಾಗರ್ ಮಿಶ್ರಾ ಅವರು ಟೈಮ್ಸ್ ಶೀಲ್ಡ್ 'ಬಿ' ಡಿವಿಷನ್ ಟೂರ್ನಿಯಲ್ಲಿ 11 ಎಸೆತದಲ್ಲಿ 9 ಸಿಕ್ಸರ್ ಚಚ್ಚಿದ್ದಾರೆ. ವೆಸ್ಟರ್ನ್ ರೈಲ್ವೆ ಪರ ಆಡುವ ಸಾಗರ್ ಮಿಶ್ರಾ ಅವರು ಆರ್'ಸಿಎಫ್ ತಂಡದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೇ, ಒಂದೇ ಓವರ್'ನಲ್ಲಿ ಆರು ಸಿಕ್ಸರ್ ಸಿಡಿಸಿ ಟೂರ್ನಿಯ ದಾಖಲೆ ಸ್ಥಾಪಿಸಿದ್ದಾರೆ.
ಬೌಲರ್'ನಿಂದಲೇ ಪ್ರಶಂಸೆ:
ಸತತ 6 ಸಿಕ್ಸರ್ ಹೊಡೆಸಿಕೊಂಡ ನತದೃಷ್ಟ ಬೌಲರ್ ತುಷಾರ್ ಕುಮಾರೆ ಎಂಬ ಆಫ್'ಸ್ಪಿನ್ನರ್. ಆದರೆ, ತನ್ನ ಬೌಲಿಂಗನ್ನು ಧೂಳೀಪಟ ಮಾಡಿದ ಬ್ಯಾಟುಗಾರನನ್ನು ತುಷಾರ್ ಪ್ರಶಂಸಿಸಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಬ್ಯಾಕ್'ಫುಟ್ ಮೇಲೆ ನಿಂತು ಮಿಡ್'ಆಫ್ ಮೇಲೆ ಭಾರಿಸಿದ ಸಿಕ್ಸರ್ ನಿಜಕ್ಕೂ ಮನಮೋಹಕವಾಗಿತ್ತು ಎಂದು ತುಷಾರ್ ಕುಮಾರೆ ಅಭಿಪ್ರಾಯಪಟ್ಟಿದ್ದಾರೆ.
ಈ ಪಂದ್ಯದಲ್ಲಿ ಸಾಗರ್ ಮಿಶ್ರಾ 46 ಬಾಲ್'ನಲ್ಲಿ 91 ರನ್ ಚಚ್ಚಿದರು. ಆಲ್'ರೌಂಡರ್ ಆಗಿರುವ ಸಾಗರ್ ಮಿಶ್ರಾ ಒಳ್ಳೆಯ ಎಡಗೈ ಸ್ಪಿನ್ನರ್ ಹಾಗೂ ಒಳ್ಳೆಯ ಫೀಲ್ಡರ್ ಕೂಡ ಹೌದು. ಕೆಲ ತಿಂಗಳ ಹಿಂದೆ ರೈಲ್ವೇಸ್ ಪರವಾಗಿ ರಣಜಿ ಟೂರ್ನಿಗೂ ಸಾಗರ್ ಮಿಶ್ರಾ ಪದಾರ್ಪಣೆ ಮಾಡಿ ಗಮನ ಸೆಳೆಯುವಂಥ ಆಟವಾಡಿದ್ದಾರೆ.
ಭವಿಷ್ಯದಲ್ಲಿ ಈ ಪ್ರತಿಭೆ ಭಾರತದ ಭರವಸೆಯ ಆಲ್'ರೌಂಡರ್ ಆಗಬಲ್ಲರೇ? ಕಾದು ನೋಡಬೇಕು.
