ನವದೆಹಲಿ(ಡಿ.25): ಕಿರಿಯರ ರಾಷ್ಟ್ರೀಯ ಕ್ರಿಕೆಟ್ ತಂಡಗಳ ಪ್ರಧಾನ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು, ಹಿರಿಯರ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆಯವರನ್ನು ಮನಸಾರೆ ಶ್ಲಾಘಿಸಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಪರೂಪದ ಸಾಧನೆ ಮಾಡಿದ ಕರುಣ್ ನಾಯರ್ ಹಾಗೂ ಜಯಂತ್ ಯಾದವ್ ಅವರ ಸಾಧನೆಗೆ ಕೊಹ್ಲಿ ಹಾಗೂ ಕುಂಬ್ಳೆಯವರ ಪ್ರೋತ್ಸಾಹವೇ ಕಾರಣ ಎಂದಿದ್ದಾರೆ.

ಚೊಚ್ಚಲ ಸರಣಿಯಲ್ಲೇ ತ್ರಿಶತಕ ದಾಖಲಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಡೆದಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌'ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಹರ್ಯಾಣದ ಜಯಂತ್ ಯಾದವ್ ಅವರ ಸಾಧನೆ ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಈ ಇಬ್ಬರೂ ಆಟಗಾರರು (ಕರುಣ್ ಮತ್ತು ಜಯಂತ್) ಕಿರಿಯರ ತಂಡಗಳ ಮೂಲಕವೇ ಹಿರಿಯರ ತಂಡ ಸೇರ್ಪಡೆಗೊಂಡವರು. ದೇಶೀಯ ಮಟ್ಟದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ, ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟಾಗಲೂ ಅಲ್ಲಿ ಅವರಿಗೆ ಉತ್ತಮ ವಾತಾವರಣ ಸಿಗುವುದು ಬಹು ಮುಖ್ಯ. ಯಾವುದೇ ಆಟಗಾರನಿಗೆ ಮೊದಮೊದಲಿಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಬೇಕೆಂದರೆ ಕೊಂಚವಾದರೂ ಒತ್ತಡವಿರುತ್ತದೆ. ಆದರೆ, ಕೊಹ್ಲಿ ಹಾಗೂ ಕುಂಬ್ಳೆಯವರ ಸಾರಥ್ಯದಲ್ಲಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಸುಂದರ ಹಾಗೂ ಸ್ವಾತಂತ್ರ್ಯದ ತಾಣವಾಗಿದೆ. ಹಾಗಾಗಿಯೇ ಈ ಇಬ್ಬರೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

‘‘ಕಿರಿಯರ ತಂಡದ ಕೋಚ್ ಆಗಿದ್ದರೂ ಹಿರಿಯರ ತಂಡದ ಜತೆಗೆ ಸದಾ ನಂಟು ಇಟ್ಟುಕೊಂಡಿರುತ್ತೇನೆ’’ ಎಂದ ದ್ರಾವಿಡ್, ‘‘ಆಟಗಾರರನ್ನು ಗುರುತಿಸುವುದು, ಪ್ರತಿಭಾನ್ವಿತರನ್ನು ಬೆಳೆಸುವುದೇ ನಮ್ಮ ಗುರಿ. ಉದಾಹರಣೆಗೆ, ಯಾವುದಾದರೊಬ್ಬ ಆಟಗಾರ ಆಲ್ರೌಂಡರ್ ಆಗುತ್ತಾನೆಂದು ಗೋಚರಿಸಿದರೆ ಅಂಥವರಿಗೆ ವಿಶೇಷ ಕಾಳಜಿಯಿತ್ತು ಪೋಷಿಸುತ್ತೇವೆ’’ ಎಂದು ಅವರು ತಿಳಿಸಿದರು.