ಮುಂಬೈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದು ಸಹಾಯಕವಾಯಿತು. ಚೆನ್ನೈ ಟೆಸ್ಟ್‌ನಲ್ಲಿ ಸಿಕ್ಕಿರುವ ಅವಕಾಶವನ್ನು ವ್ಯರ್ಥಗೊಳಿಸಬಾರದೆಂದು ಮೊದಲೇ ನಿರ್ಧರಿಸಿದ್ದೆ. ಅದರಂತೆ ಸಮಚಿತ್ತದಿಂದ ಬ್ಯಾಟಿಂಗ್ ನಡೆಸಿದೆ. ದ್ವಿಶತಕ ವಂಚಿತವಾಗಿದ್ದು ಹೆಚ್ಚು ಬಾಧಿಸಿಲ್ಲ.- ಕೆ.ಎಲ್. ರಾಹುಲ್
ಚೆನ್ನೈ(ಡಿ.18): ಆರಂಭಿಕ ಆಟಗಾರ, ಕರ್ನಾಟಕದ ಕೆ.ಎಲ್. ರಾಹುಲ್ ಅವರ ಆಕರ್ಷಕ 199 ರನ್ (311 ಎಸೆತ, 16 ಬೌಂಡರಿ, 3 ಸಿಕ್ಸರ್) ನೆರವಿನಿಂದಾಗಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ತನ್ನ ಮೊದಲ ಇನಿಂಗ್ಸ್'ನಲ್ಲಿ ದಿಟ್ಟ ಉತ್ತರ ನೀಡಿದೆ.
ಪ್ರವಾಸಿಗರು ತಮ್ಮ ಮೊದಲ ಇನಿಂಗ್ಸ್ನಲ್ಲಿ ಪೇರಿಸಿದ್ದ 477 ರನ್ ದೊಡ್ಡ ಮೊತ್ತವನ್ನು ಹಿಂದಿಕ್ಕಲು ಪಂದ್ಯದ 2ನೇ ದಿನವಾದ ಶನಿವಾರವೇ ಕಣಕ್ಕಿಳಿದಿದ್ದ ಭಾರತ ದಿನಾಂತ್ಯದ ಹೊತ್ತಿಗೆ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿತ್ತು. ಇಂದು ತನ್ನ ಇನಿಂಗ್ಸ್ ಮುಂದುವರಿಸಿ ದಿನಾಂತ್ಯದ ಹೊತ್ತಿಗೆ 391 ರನ್ ಗಳಿಸಿದೆ. ಮೊದಲ ಇನಿಂಗ್ಸ್ನಲ್ಲಿ ಆಂಗ್ಲರಿಗಿಂತ ಮುನ್ನಡೆ ಸಾಧಿಸಲು 86 ರನ್ ಪೇರಿಸಬೇಕಿರುವ ಭಾರತದ ಪರವಾಗಿ ಕರ್ನಾಟಕದ ಮತ್ತೊಬ್ಬ ಆಟಗಾರ ಕರುಣ್ ನಾಯರ್ ಹಾಗೂ ವಿಜಯ್ ಮುರಳಿ ಸೋಮವಾರ ಇನಿಂಗ್ಸ್ ಮುಂದುವರಿಸಲಿದ್ದಾರೆ.
ದ್ವಿಶತಕ ವಂಚಿತ: ಶನಿವಾರ ದಿನಾಂತ್ಯಕ್ಕೆ 30 ರನ್ ಗಳಿಸಿ ಅಜೇಯರಾಗುಳಿದಿದ್ದ ಕೆ.ಎಲ್. ರಾಹುಲ್, ಇಂದಿನ ದಿನದಾಟದಲ್ಲಿ ಆಂಗ್ಲ ಬೌಲರ್ಗಳನ್ನು ಅಕ್ಷರಶಃ ಕಾಡಿದರು. ಮುಂದಕ್ಕೆ ರಾಹುಲ್ ಬ್ಯಾಟ್ನಿಂದ ರನ್ ಹೊಳೆ ಲೀಲಾಜಾಲವಾಗಿ ಹರಿದುಬಂತು. ಈ ಮೂಲಕ ರಾಹುಲ್ ತಮ್ಮ ವೃತ್ತಿಜೀವನದ ನಾಲ್ಕನೇ ಹಾಗೂ ಸ್ವದೇಶದಲ್ಲಿ ಮೊದಲ ಶತಕ ಸಿಡಿಸಿ ಮಿಂಚಿದರು. ಕೊಹ್ಲಿ ವಿಕೆಟ್ ಪತನಗೊಂಡ ನಂತರ ಬಂದ ಕರ್ನಾಟಕದ ಮತ್ತೊಬ್ಬ ಆಟಗಾರ ಕರುಣ್ ನಾಯರ್ ಜತೆಗೂಡಿ 4ನೇ ವಿಕೆಟ್ಗೆ 161 ರನ್ಗಳ ಜತೆಯಾಟ ನೀಡಿದ ಅವರು, ಭಾರತದ ಇನಿಂಗ್ಸ್ಗೆ ಅಕ್ಷರಶಃ ಆಧಾರಸ್ತಂಭವಾಗಿ ನಿಂತರು. ಆದರೆ, ದಿನದಾಟದಲ್ಲಿ ಭಾರತೀಯ ಪ್ರೇಕ್ಷಕರು ಇಷ್ಟಪಡದ ಅನಿರೀಕ್ಷಿತ ನಿರಾಸೆ ಅವರನ್ನೂ ಕಾಡಿತು. ದ್ವಿಶತಕದ ಅಂಚಿನಲ್ಲಿದ್ದಾಗ ಅವರು ರಶೀದ್ ಬೌಲಿಂಗ್ನಲ್ಲಿ ಕವರ್ ಪಾಯಿಂಟ್ ಕಡೆಗೆ ಚೆಂಡನ್ನು ತಳ್ಳಿದ ರಾಹುಲ್ ಅಲ್ಲಿ ನಿಂತಿದ್ದ ಬಟ್ಲರ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ರಾಹುಲ್ ಪತನದ ನಂತರ ಕ್ರೀಸ್ನಲ್ಲಿದ್ದ ನಾಯರ್ ಅವರನ್ನು ಕೂಡಿಕೊಂಡ ಮರಳಿ ವಿಜಯ್, ಇನಿಂಗ್ಸ್ನ ಮೊತ್ತವನ್ನು 391 ಕ್ಕೆ ಕೊಂಡೊಯ್ದರು. ದಿನಾಂತ್ಯದ ಹೊತ್ತಿಗೆ ಅರ್ಧಶತಕ ಸಿಡಿಸಿರುವ ನಾಯರ್ ಗಮನ ಸೆಳೆದಿದ್ದಾರೆ.
ಸ್ಕೋರ್ ವಿವರ
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ : 477
ಭಾರತ ಪ್ರಥಮ ಇನಿಂಗ್ಸ್: 109 ಓವರ್ಗಳಲ್ಲಿ 4 ವಿಕೆಟ್ಗೆ 391
ಕೆಎಲ್ ರಾಹುಲ್ 199
ಕರುಣ್ ನಾಯರ್ 71*
