ಮೆಲ್ಬರ್ನ್(ಜ.23): ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂ ಪುರುಷರ ಸಿಂಗಲ್ಸ್‌ನಲ್ಲಿ ರಾಫೆಲ್ ನಡಾಲ್ ಗೆಲುವಿನ ಓಟ ಮುಂದುವರಿಸಿದ್ದು, ಸೆಮೀಸ್‌ಗೆ ಲಗ್ಗೆ ಇಟ್ಟಿದ್ದಾರೆ. 

ಪ್ರಿ ಕ್ವಾರ್ಟರ್‌ನಲ್ಲಿ ರೋಜರ್ ಫೆಡರರ್‌ನ್ನು ಹೊರದಬ್ಬಿದ ಗ್ರೀಸ್‌ನ 20ರ ಯುವಕ ಸ್ಟೆಫಾನೊ ಟಿಟ್ಸಿಪಾಸ್, ಗ್ರ್ಯಾಂಡ್ ಸ್ಲಾಂನಲ್ಲಿ ಚೊಚ್ಚಲ ಬಾರಿಗೆ ಸೆಮೀಸ್‌ಗೇರಿದ ಅತಿ ಕಿರಿಯ ಟೆನಿಸಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ತಾರಾ ಟೆನಿಸಿಗ ನಡಾಲ್, ಅಮೆರಿಕದ ಫ್ರಾನ್ಸಸ್ ಎದುರು 6-3, 6-4, 6-2 ಸೆಟ್'ಗಳಲ್ಲಿ ಗೆಲುವು ಪಡೆದರು. ಗ್ರ್ಯಾಂಡ್ ಸ್ಲಾಮ್‌ನಲ್ಲಿ 30ನೇ ಬಾರಿಗೆ ಸೆಮೀಸ್ ಪ್ರವೇಶಿಸಿದರು. ಮತ್ತೊಂದು ಎಂಟರಘಟ್ಟದ ಸಿಂಗಲ್ಸ್‌ನಲ್ಲಿ ಗ್ರೀಸ್‌ನ ಟಿಟ್ಸಿಪಾಸ್, ಸ್ಪೇನ್‌ನ ಬಟಿಸ್ಟಾ ಆಗುಟ್ ಎದುರು 7-5, 4-6, 6-4, 7-6 ಸೆಟ್‌ಗಳಲ್ಲಿ ಗೆದ್ದರು.

ಬಾರ್ಟಿ ಹೊರದಬ್ಬಿದ ಕ್ವಿಟೋವಾ: ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಆಶ್ಲೆ ಬಾರ್ಟಿ ವಿರುದ್ಧ 6-1, 6-4 ರಲ್ಲಿ ಜಯಿಸಿದರು. ಇನ್ನೊಂದು ಕ್ವಾರ್ಟರ್‌ನಲ್ಲಿ ಅಮೆರಿಕದ ಕಾಲಿನ್ಸ್ ಗೆದ್ದರು.

ಪೇಸ್-ಸೌಸ್ಟರ್ ಜೋಡಿ ಔಟ್: ಮಿಶ್ರ ಡಬಲ್ಸ್‌ನ ಪ್ರಿಕ್ವಾರ್ಟರ್‌ನಲ್ಲಿ ಭಾರತದ ಪೇಸ್-ಸಮಂತಾ, ಕೊಲಂಬಿಯಾದ ರಾಬೆರ್ಟ್, ಅನ್ನಾ ಜೋಡಿ ವಿರುದ್ಧ 6-4, 4-6, 8-10 ಸೆಟ್‌ಗಳಲ್ಲಿ ಸೋಲು ಕಂಡಿತು.