2014ರಲ್ಲಿ ಚೀನಾ ಓಪನ್ ಮುಡಿಗೇರಿಸಿಕೊಂಡು ಇತಿಹಾಸ ಬರೆದಿದ್ದ ಸೈನಾ ನೆಹ್ವಾಲ್, ಕಳೆದ ವರ್ಷ(2015) ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ ಈ ಬಾರಿ ಪಿ.ವಿ ಸಿಂಧು ಸೂಪರ್ ಸೀರಿಸ್ ಗೆಲ್ಲುವ ಮೂಲಕ ಚೀನಾದಲ್ಲಿ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ನವದೆಹಲಿ(ನ.20): ಒಲಿಂಪಿಕ್ ರಜತ ಪದಕ ವಿಜೇತೆ ಪಿ.ವಿ. ಸಿಂಧು ಚೀನಾದ ಬಲಿಷ್ಟ ಆಟಗಾರ್ತಿಯನ್ನು ಮಣಿಸುವ ಮೂಲಕ ಚೊಚ್ಚಲ ಚೀನಾ ಓಪನ್ ಸೂಪರ್ ಸೀರೀಸ್'ನ $700,000 ಮೊತ್ತದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಿಯೊ ಕೂಟದ ಪ್ರದರ್ಶನವನ್ನು ಇಲ್ಲೂ ಮುಂದುವರೆಸಿದ ಸಿಂಧು, ಚೀನಾದ ಸನ್ ಯೂ ಅವರನ್ನು 21-11, 17-21, 21-11 ಸೆಟ್'ಗಳ ಅಂತರದಲ್ಲಿ ಸೋಲುಣಿಸುವ ಮೂಲಕ ಚೀನಾದ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಹೈಕ್ಸಿಯಾ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯಾವಳಿಯಲ್ಲಿ ವಿಶ್ವದ 11ನೇ ಶ್ರೇಯಾಂಕಿತೆ ಸಿಂಧು ಚೀನಾದ ಆಟಗಾರ್ತಿಯನ್ನು 2-1 ಸೆಟ್'ಗಳ ಅಂತರದಲ್ಲಿ ಬಗ್ಗುಬಡಿಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ ಪಿ.ವಿ. ಸಿಂಧು ಚೀನಾದ ಸನ್ ಯೂ ಅವರನ್ನು ಎರಡು ಬಾರಿ ಸೋಲಿಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಹೈದರಾಬಾದ್ ಆಟಗಾರ್ತಿ ಮೊದಲ ಸೆಟ್ ಅನ್ನು 21-11 ಅಂತರದಲ್ಲಿ ಮೇಲುಗೈ ಸಾಧಿಸಿದರು. ಆದರೆ ಎರಡನೇ ಸೆಟ್'ನಲ್ಲಿ ಭಾರತೀಯ ಆಟಗಾರ್ತಿಗೆ ಪ್ರಬಲ ತಿರುಗೇಟು ನೀಡಿದ ಸನ್ ಯೂ 21-17 ಅಂಕಗಳ ಅಂತರದಲ್ಲಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಹಾಗೂ ಅಂತಿಮ ಸೆಟ್'ನಲ್ಲಿ ಚೀನಾದ ಆಟಗಾರ್ತಿಗೆ ಪುಟಿದೇಳಲು ಯಾವುದೇ ಅವಕಾಶ ನೀಡದ ಸಿಂಧು 21-11 ಅಂಕಗಳಿಂದ ಮಣಿಸುವ ಮೂಲಕ ಚೀನಾದ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಸಫಲರಾದರು.