ಹಾಂಕಾಂಗ್(ನ.24): ಪ್ರತಿಷ್ಠಿತ ಹಾಂಕಾಂಗ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಗೆಲುವಿನ ಅಭಿಯಾನ ಮುಂದುವರೆದಿದ್ದು, ಹೈದರಾಬಾದ್‌'ನ ಈ ಇಬ್ಬರು ಆಟಗಾರ್ತಿಯರೂ ಅಂತಿಮ ಎಂಟರ ಘಟ್ಟಕ್ಕೆ ಧಾವಿಸಿದ್ದಾರೆ.

ಗುರುವಾರ ಇಲ್ಲಿನ ಹಾಂಕಾಂಗ್ ಕೊಲಿಸಿಯಮ್ - 1 ಕೋರ್ಟ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್, ಜಪಾನ್‌ನ ಸಯಾಕ ಸ್ಯಾಟೊ ವಿರುದ್ಧ ಕಠಿಣ ಹೋರಾಟ ನಡೆಸಿ 21-18, 9-21, 21-16ರಿಂದ ಜಯ ಪಡೆದರೆ, ಇತ್ತೀಚೆಗಷ್ಟೇ ಚೀನಾ ಓಪನ್‌ನಲ್ಲಿ ಚಾಂಪಿಯನ್ ಆದ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ. ವಿ. ಸಿಂಧು ಚೈನೀಸ್ ತೈಪೆಯ ಹ್ಸು ಯಾ ಚಿಂಗ್ ವಿರುದ್ಧ 21-10, 21-14ರ ಎರಡು ನೇರ ಗೇಮ್‌ಗಳ ಆಟದಲ್ಲಿ ಗೆಲುವು ಪಡೆದು ಕ್ವಾರ್ಟರ್‌ ಫೈನಲ್ ತಲುಪಿದರು.

ಮುಂದಿನ ಸುತ್ತಿನಲ್ಲಿ ಸಿಂಧು, ಸಿಂಗಪುರದ ಕ್ಸಿಯಾಯು ಲಿಯಾಂಗ್ ವಿರುದ್ಧ ಕಾದಾಡಲಿದ್ದರೆ, ಮೊಣಕಾಲು ಶಸಚಿಕಿತ್ಸೆಯ ಬಳಿಕ ಮೊಟ್ಟಮೊದಲ ಪ್ರಶಸ್ತಿಗಾಗಿ ಸೆಣಸುತ್ತಿರುವ ಸೈನಾ, ಸ್ಥಳೀಯ ಆಟಗಾರ್ತಿ ಚೆಯುಂಗ್ ನ್ಯಾನ್ ಯೀ ವಿರುದ್ಧ ಕಾದಾಡಲಿದ್ದಾರೆ.

ಗೆದ್ದ ಜಯರಾಂ

ಇತ್ತ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತ ಮಿಶ್ರ ಫಲವನ್ನನುಭವಿಸಿತು. ಮೊದಲು ನಡೆದ ಸೆಣಸಾಟದಲ್ಲಿ ಯುವ ಆಟಗಾರ ಎಚ್.ಎಸ್. ಪ್ರಣಯ್ ಮೂರು ಗೇಮ್‌'ಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಮಲೇಷಿಯಾ ಆಟಗಾರ ಚೊಂಗ್ ವೀ ಲಿಂಗ್ ವಿರುದ್ಧ 21-15, 11-21, 15-21ರಿಂದ ಸೋಲನುಭವಿಸಿದರು. ಆದರೆ, ಆನಂತರದಲ್ಲಿ ನಡೆದ ಪುರುಷರ ಎರಡು ಸಿಂಗಲ್ಸ್ ವಿಭಾಗದ ಹದಿನಾರರ ಘಟ್ಟದ ಪಂದ್ಯಗಳಲ್ಲಿ ಅಜಯ್ ಜಯರಾಂ ಚೀನಾದ ಹುವಾಂಗ್ ಯುಕ್ಸಿಯಾಂಗ್ ವಿರುದ್ಧ 21-18, 21-19ರ ಎರಡು ನೇರ ಗೇಮ್‌ಗಳಲ್ಲಿ ಜಯಿಸಿದರೆ, ಜಪಾನ್‌ನ ಕಜುಮಾಸ ಸಾಕೈ ವಿರುದ್ಧ ಸಮೀರ್ ವರ್ಮಾ 19-21, 21-15, 21-11ರಿಂದ ಜಯಭೇರಿ ಬಾರಿಸಿದರು.