ಮೊದಲ ಗೇಮ್‌'ನಲ್ಲಿ ಸೋಲು ಕಂಡ ಸಿಂಧು, ಎರಡನೇ ಗೇಮ್‌ನಲ್ಲಿ ಪುಟಿದೆದ್ದರಾದರೂ ಸುನ್ ಯು ಪ್ರಭಾವಿ ಆಟಕ್ಕೆ ಅಂತಿಮವಾಗಿ ಮಣಿಯಲೇಬೇಕಾಯಿತು.

ದುಬೈ(ಡಿ.15): ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ದುಬೈ ವಿಶ್ವ ಸೂಪರ್ ಸೀರಿಸ್ ಪಂದ್ಯಾವಳಿಯಲ್ಲಿ ಸೋಲನುಭವಿಸಿದ್ದಾರೆ.

‘ಬಿ’ ಗುಂಪಿನಲ್ಲಿ ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಸುನ್ ಯು ವಿರುದ್ಧ ಸೆಣಸಿದ ಸಿಂಧು, 15-21, 17-21 ಗೇಮ್‌'ಗಳ ಅಂತರದಲ್ಲಿ ಪರಾಭವಗೊಂಡರು.

ಪಂದ್ಯದ ಆರಂಭದಲ್ಲಿ ಚುರುಕಿನ ಪ್ರದರ್ಶನ ತೋರಿದರೂ, ಚೀನಾ ಆಟಗಾರ್ತಿಯ ಪಾದರಸದಂಥ ಆಕ್ರಮಣಕಾರಿ ಆಟದ ಮುಂದೆ ಕೊಂಚ ಮಂಕಾಗಿ ಕಂಡ ಸಿಂಧು, ಅಲ್ಲಲ್ಲಿ ತಪ್ಪುಗಳೆನ್ನೆಸಗಿ ಅಂಕಗಳನ್ನು ಎದುರಾಳಿಗೆ ಬಿಟ್ಟುಕೊಟ್ಟರು. ಹಾಗಾಗಿ, ಮೊದಲ ಗೇಮ್‌'ನಲ್ಲಿ ಸೋಲು ಕಂಡ ಸಿಂಧು, ಎರಡನೇ ಗೇಮ್‌ನಲ್ಲಿ ಪುಟಿದೆದ್ದರಾದರೂ ಸುನ್ ಯು ಪ್ರಭಾವಿ ಆಟಕ್ಕೆ ಅಂತಿಮವಾಗಿ ಮಣಿಯಲೇಬೇಕಾಯಿತು.

ಬುಧವಾರ ನಡೆದಿದ್ದ ತಮ್ಮ ಮೊದಲ ಪಂದ್ಯದಲ್ಲಿ ಜಪಾನ್‌'ನ ಅಕಾನೆ ವಿರುದ್ಧ 12-21, 21-8, 21-15 ಗೇಮ್‌'ಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಇದೀಗ, ದ್ವಿತೀಯ ಪಂದ್ಯದಲ್ಲಿ ಸೋತಿದ್ದರೂ ಶುಕ್ರವಾರ ನಡೆಯಲಿರುವ ತಮ್ಮ ಮೂರನೇ ಪಂದ್ಯದಲ್ಲಿ ಅವರು, ವಿಶ್ವದ ದ್ವಿತೀಯ ಶ್ರೇಯಾಂಕಿತೆ ಸ್ಪೇನ್‌'ನ ಕರೊಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ.

ರಿಯೊ ಒಲಿಂಪಿಕ್ಸ್‌'ನ ಫೈನಲ್ ಪಂದ್ಯದಲ್ಲಿ ಮರಿನ್ ವಿರುದ್ಧವೇ ಸೋತಿದ್ದ ಸಿಂಧು, ಮಹಾ ಕ್ರೀಡಾಕೂಟದ ನಂತರ ಇದೇ ಮೊದಲ ಬಾರಿಗೆ ಮರಿನ್ ಅವರನ್ನು ಎದುರುಗೊಳ್ಳುತ್ತಿದ್ದು ಈ ಪಂದ್ಯ ಕ್ರೀಡಾಭಿಮಾನಿಗಳ ಕುತೂಹಲ ಕೆರಳಿಸಿದೆ.