ಪ್ರತಿಯೊಂದು ಶಾಟ್‌'ಗಳಲ್ಲೂ ಪಾಯಿಂಟ್ಸ್‌'ಗಾಗಿ ಮುಗಿಬಿದ್ದ ಮರಿನ್ ವಿರುದ್ಧ ಅಷ್ಟೇ ಪ್ರಖರ ದಾಳಿ ನಡೆಸಿದ ಸಿಂಧು ಆಕೆಗೆ ಸವಾಲಾಗಿ ಪರಿಣಮಿಸಿದರು.

ದುಬೈ(ಡಿ.16): ಪ್ರತಿಷ್ಠಿತ ರಿಯೊ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ್ದ ಸೋಲಿನ ಬೇಗುದಿಯಿಂದಲೇ ಬೇಸತ್ತಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು, ಸ್ಪೇನ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಕೇವಲ ನಾಲ್ಕು ತಿಂಗಳ ಅಂತರದಲ್ಲೇ ಮುಯ್ಯಿ ತೀರಿಸಿ ಆ ಮೂಲಕ ವಿಶ್ವ ಸಿರೀಸ್ ಬ್ಯಾಡ್ಮಿಂಟನ್ ಸೂಪರ್ ಸಿರೀಸ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದರು.

ಕೋಟ್ಯಾನು ಕೋಟಿ ಭಾರತೀಯರ ಒಲಿಂಪಿಕ್ ಚಿನ್ನದ ಪದಕದ ಕನಸನ್ನು ನುಚ್ಚುನೂರು ಮಾಡಿದ್ದ ಸ್ಪೇನ್ ಆಟಗಾರ್ತಿಯ ವಿರುದ್ಧ ಇಂದು ಮಹತ್ವಪೂರ್ಣ ಪಂದ್ಯದಲ್ಲಿ ಅತ್ಯಬ್ಬರದ ಆಟವಾಡಿದ ಸಿಂಧು 21-17, 21-13ರಿಂದ ಮರಿನ್ ಹೋರಾಟಕ್ಕೆ ತೆರೆ ಎಳೆದರು.

‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರೂ, ಆನಂತರದ ಎರಡನೇ ಪಂದ್ಯದಲ್ಲಿ ಚೀನಿ ಆಟಗಾರ್ತಿ ಸುನ್ ಯು ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದ ಸಿಂಧು, ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯಯವಾಗಿತ್ತು. ಹೀಗಾಗಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ನಿಶ್ಚಯಿಸಿಕೊಂಡೇ ಕಣಕ್ಕಿಳಿದಿದ್ದ ಸಿಂಧು, 46 ನಿಮಿಷಗಳ ಜಿದ್ದಾಜಿದ್ದಿನ ಸೆಣಸಿನಲ್ಲಿ ಜಯಶಾಲಿಯಾದರು.

ಒಟ್ಟಾರೆ ಮುಖಾಮುಖಿಯಲ್ಲಿ 5-2ರ ಮುನ್ನಡೆಯಿಂದ ಮೇಲುಗೈ ಮೆರೆದಿದ್ದ ಮರಿನ್‌'ಗೆ ಈ ಬಾರಿ ಸಿಂಧು ತಿರುಗೇಟು ನೀಡಿದರು. ಪ್ರತಿಯೊಂದು ಶಾಟ್‌'ಗಳಲ್ಲೂ ಪಾಯಿಂಟ್ಸ್‌'ಗಾಗಿ ಮುಗಿಬಿದ್ದ ಮರಿನ್ ವಿರುದ್ಧ ಅಷ್ಟೇ ಪ್ರಖರ ದಾಳಿ ನಡೆಸಿದ ಸಿಂಧು ಆಕೆಗೆ ಸವಾಲಾಗಿ ಪರಿಣಮಿಸಿದರು. ಸಿಂಧು ನಿಖರ ಸ್ಮ್ಯಾಶ್‌'ಗಳಿಂದ ಮರಿನ್ ದಿಕ್ಕುತಪ್ಪಿಸಿ ಗೇಮ್ ಅನ್ನು ವಶಕ್ಕೆ ಪಡೆದರು. ಇನ್ನು ಎರಡನೇ ಗೇಮ್‌'ನಲ್ಲಂತೂ ಸಿಂಧು ಆರ್ಭಟದ ಮುಂದೆ ಮರಿನ್ ತತ್ತರಿಸಿ ಹೋದರು. ಒತ್ತಡಕ್ಕೆ ಒಳಗಾದ ಮರಿನ್ ವೈಡ್ ಶಾಟ್‌'ಗಳಿಂದ ಕಂಗೆಟ್ಟದ್ದು ಸಿಂಧು ಜಯಭೇರಿಗೆ ಸುಲಭ ಮಾರ್ಗ ಕಲ್ಪಿಸಿತು.