2014ರ ಆವೃತ್ತಿಯಲ್ಲಿ ಈ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಸೈನಾ, ಕಳೆದ ವರ್ಷ ರನ್ನರ್ ಅಪ್ ಆಗಿದ್ದರು. ಆದರೆ, ಈ ಬಾರಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ.
ಜುಹು(ಚೀನಾ)(ನ.16): ರಿಯೊ ಒಲಿಂಪಿಕ್ಸ್ ನಂತರ ಮೊಣಕಾಲು ಶಸ್ತ್ರಚಿಕಿತ್ಸೆಗೊಳಗಾಗಿ ಮೂರು ತಿಂಗಳ ವಿಶ್ರಾಂತಿಯ ಬಳಿಕ ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೂಲಕ ವೃತ್ತಿಜೀವನಕ್ಕೆ ಪುನಃ ಕಾಲಿಟ್ಟಿದ್ದ ಸ್ಟಾರ್ ಕ್ರೀಡಾಳು ಸೈನಾ ನೆಹ್ವಾಲ್, ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್'ನ ಪೊರ್ನ್‌ಟಿಪ್ ಬುರಾನಾ ಪ್ರಸೇರ್'ತ್ಸುಕ್ ವಿರುದ್ಧದ ಪಂದ್ಯದಲ್ಲಿ ಅವರು, 16-21, 21-19, 14-21 ಗೇಮ್‌ಗಳ ಅಂತರದಲ್ಲಿ ಸೋಲು ಕಂಡರು. 2014ರ ಆವೃತ್ತಿಯಲ್ಲಿ ಈ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಸೈನಾ, ಕಳೆದ ವರ್ಷ ರನ್ನರ್ ಅಪ್ ಆಗಿದ್ದರು. ಆದರೆ, ಈ ಬಾರಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ.
ಸಿಂಧುಗೆ ಮುನ್ನಡೆ:
ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೇನ ಚಿಯಾ ಹ್ಸಿನ್ ಲೀ ವಿರುದ್ಧ 21-12, 21-16 ಗೇಮ್'ಗಳ ಅಂತರದಲ್ಲಿ ಜಯಿಸಿ ದ್ವಿತೀಯ ಸುತ್ತಿಗೆ ಪಾದಾರ್ಪಣೆ ಮಾಡಿದರು. ಕೇವಲ 34 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅತ್ಯುತ್ತಮ ಹೋರಾಟ ತೋರಿದ ಸಿಂಧು, ದುರ್ಬಲ ಎದುರಾಳಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು. ವಿಶ್ವ ಚಾಂಪಿಯನ್'ಶಿಪ್'ನಲ್ಲೂ ಎರಡು ಬಾರಿ ಕಂಚು ಗೆದ್ದ ಸಾಧನೆಗೈದಿರುವ ಸಿಂಧು, ಮುಂದಿನ ಸೆಣಸಿನಲ್ಲಿ ಅಮೆರಿಕದ ಬೈವಾನ್ ಝಾಂಗ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಜಯರಾಮ್, ಪ್ರಣಯ್ ದ್ವಿತೀಯ ಸುತ್ತಿಗೆ:
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಾಲಿಟ್ಟಿದ್ದ ಅಜಯ್ ಜಯರಾಮ್ ಹಾಗೂ ಎಚ್.ಎಸ್. ಪ್ರಣಯ್, ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ದ್ವಿತೀಯ ಸುತ್ತಿಗೆ ಕಾಲಿಟ್ಟಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 23ನೇ ಶ್ರೇಯಾಂಕಿತ ಅಜಯ್, ಚೀನಾದ ಝು ಸಿಯುನ್ ವಿರುದ್ಧ 21-19, 20-22, 21-17 ಗೇಮ್'ಗಳ ಅಂತರದಲ್ಲಿ ಜಯ ಸಾಧಿಸಿದರೆ, ವಿಶ್ವದ 28ನೇ ಶ್ರೇಯಾಂಕಿತರಾದ ಪ್ರಣಯ್, ಹಾಂಕಾಂಗ್‌ನ ಎನ್‌ಜಿ ಲಾಂಗ್ ಆ್ಯಂಗಸ್ 21-13, 21-13 ಗೇಮ್'ಗಳ ಅಂತರದಲ್ಲಿ ಸೋಲಿಸಿ ಮುಂದಡಿಯಿಟ್ಟರು.
