ಕೋಲ್ಕತಾ(ಡಿ.23): ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ‘ಎ’ ವಲಯದಲ್ಲಿ ಅಗ್ರಸ್ಥಾನ ಪಡೆದು ಪ್ಲೇ-ಆಫ್‌ನ ಕ್ವಾಲಿಫೈಯರ್‌-1 ಪಂದ್ಯಕ್ಕೆ ಆರ್ಹತೆ ಪಡೆಯುವ ಯು ಮುಂಬಾ ಕನಸು ಭಗ್ನಗೊಂಡಿದೆ. ಶನಿವಾರ ಇಲ್ಲಿ ನಡೆದ ಅಂತರ ವಲಯ ವೈಲ್ಡ್‌ಕಾರ್ಡ್‌ ಪಂದ್ಯದಲ್ಲಿ ಯು.ಪಿ.ಯೋಧಾ ವಿರುದ್ಧ 32-34ರಲ್ಲಿ ಸೋಲು ಕಂಡ ಮುಂಬಾ ಲೀಗ್‌ ಹಂತದ ಪಂದ್ಯವನ್ನು ಮುಕ್ತಾಯಗೊಳಿಸಿದ್ದು ‘ಎ’ ವಲಯದಲ್ಲಿ 2ನೇ ಸ್ಥಾನದೊಂದಿಗೆ ಪ್ಲೇ-ಆಫ್‌ ಪ್ರವೇಶಿಸಲಿದೆ. ತಂಡ 22 ಪಂದ್ಯಗಳಲ್ಲಿ 15 ಗೆಲುವುಗಳೊಂದಿಗೆ 86 ಅಂಕ ಕಲೆಹಾಕಿದೆ. ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 21 ಪಂದ್ಯಗಳಲ್ಲಿ 16 ಗೆಲುವುಗಳೊಂದಿಗೆ 88 ಅಂಕ ಸಂಪಾದಿಸಿದ್ದು, ಒಂದು ಪಂದ್ಯ ಬಾಕಿ ಇರುವಂತೆಯೇ ‘ಎ’ ವಲಯದಿಂದ ಕ್ವಾಲಿಫೈಯರ್‌-1 ಪಂದ್ಯಕ್ಕೇರುವ ತಂಡ ಎನಿಸಿಕೊಂಡಿದೆ. ದಬಾಂಗ್‌ ಡೆಲ್ಲಿ, ‘ಎ’ ವಲಯದಿಂದ ಪ್ಲೇ-ಆಫ್‌ಗೇರಲಿರುವ 3ನೇ ತಂಡ.

ರೋಚಕ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಮೊದಲಾರ್ಧದ ಮುಕ್ತಾಯಕ್ಕೆ 18-15ರಿಂದ ಮುಂದಿದ್ದ ಯೋಧಾ, ದ್ವಿತೀಯಾರ್ಧದಲ್ಲೂ ಎಚ್ಚರಿಕೆಯ ಆಟವಾಡಿ 2 ಅಂಕಗಳಿಂದ ಜಯಿಸಿತು. ಇದರೊಂದಿಗೆ ಪ್ಲೇ-ಆಫ್‌ಗೇರುವ ಕನಸನ್ನು ಯೋಧಾ ಜೀವಂತವಾಗಿರಿಸಿಕೊಂಡಿತು.

ಟರ್ನಿಂಗ್‌ ಪಾಯಿಂಟ್‌: ಅಂತಿಮ ನಿಮಿಷದಲ್ಲಿ ಉಭಯ ತಂಡಗಳು 32-32ರಲ್ಲಿ ಸಮಬಲ ಸಾಧಿಸಿದ್ದವು. ಆದರೆ ಪ್ರಶಾಂತ್‌ ರೈ ಕೊನೆ ಕ್ಷಣದಲ್ಲಿ 2 ಅಂಕ ಗಳಿಸಿ ಯೋಧಾ ಗೆಲುವಿಗೆ ಕಾರಣರಾದರು.

ಗಣೇಶ್‌ ಪ್ರಸಾದ್‌ ಕುಂಬ್ಳೆ