PKL 2023 ಕಬಡ್ಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಪ್ರೊ ಕಬಡ್ಡಿಗೆ ಪವನ್ ಶೆರಾವತ್ ಎಂಟ್ರಿ..?
ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಪವನ್ ಶೆಹ್ರಾವತ್ ಎಂಟ್ರಿ
ಆಟಗಾರನಾಗಿ ಅಲ್ಲ, ಕಾಮೆಂಟ್ರಿಯಲ್ಲಿ ಪವನ್ ಝಲಕ್
ಮೊದಲ ಪಂದ್ಯದಲ್ಲೇ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಶೆಹ್ರಾವತ್
ಬೆಂಗಳೂರು(ಡಿ.01): ಗಾಯದ ಸಮಸ್ಯೆಯಿಂದಾಗಿ ತಾರಾ ಕಬಡ್ಡಿ ಪಟು ಪವನ್ ಕುಮಾರ್ ಶೆರಾವತ್ 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಿಂದ ಹೊರಬಿದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಕಬಡ್ಡಿ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ತಮಿಳ್ ತಲೈವಾಸ್ ತಂಡದ ಸ್ಟಾರ್ ರೈಡರ್ ಪವನ್ ಶೆರಾವತ್, ಇದೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆಟಗಾರನಾಗಿ ಅಲ್ಲ ಬದಲಾಗಿ ವೀಕ್ಷಕ ವಿವರಣೆಗಾರರಾಗಿ ಪವನ್ ಶೆರಾವತ್ ಕಬಡ್ಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
23 ವರ್ಷದ ಬೆಂಗಳೂರು ಬುಲ್ಸ್ ತಂಡದ ಮಾಜಿ ನಾಯಕ ಹಾಗೂ ತಮಿಳ್ ತಲೈವಾಸ್ ತಂಡದ ಹಾಲಿ ಆಟಗಾರ ಪವನ್ ಶೆರಾವತ್, ಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ಕ್ಯಾಮರ ಮುಂದೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಪವನ್ ಕುಮಾರ್ ಶೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ಫ್ರಾಂಚೈಸಿಯು ಬರೋಬ್ಬರಿ 2.23 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪವನ್ ಶೆಹ್ರಾವತ್, ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಪವನ್ ಶೆಹ್ರಾವತ್ ಗುಜರಾತ್ ಜೈಂಟ್ಸ್ ಎದುರಿನ ತಾನಾಡಿದ ಮೊದಲ ಪಂದ್ಯದಲ್ಲಿಯೇ ಗಾಯಕ್ಕೆ ತುತ್ತಾಗಿದ್ದರು. ಇದರ ಬೆನ್ನಲ್ಲೇ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಇದಾದ ಬಳಿಕ ಪವನ್ ಶೆಹ್ರಾವತ್, ಬಲಗಾಲಿನ ಮಂಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದಾದ ಬಳಿಕ ಅಧಿಕೃತವಾಗಿಯೇ ಪವನ್ ಶೆಹ್ರಾವತ್ 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಿಂದ ಹೊರಬಿದ್ದಿದ್ದರು.
ಕೈ ತಪ್ಪಿದ ಪವನ್ ಶೆರಾವತ್, ಕಣ್ಣೀರಿಟ್ಟ ಬೆಂಗಳೂರು ಬುಲ್ಸ್ ಕೋಚ್!
ಪವನ್ ಶೆಹ್ರಾವತ್ ಸದ್ಯ 987 ರೇಡ್ ಪಾಯಿಂಟ್‌ಗಳೊಂದಿಗೆ ಪ್ರೊ ಕಬಡ್ಡಿ ಟೂರ್ನಿ ಇತಿಹಾಸದಲ್ಲಿಯೇ ಅತಿಹೆಚ್ಚು ರೇಡ್ ಪಾಯಿಂಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಯುಪಿ ಯೋಧಾಸ್ ತಂಡದ ಪ್ರದೀಪ್ ನರ್ವಾಲ್ 1533* ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಬೆಂಗಾಲ್ ವಾರಿಯರ್ಸ್ ತಂಡದ ಮಣೀಂದರ್ ಸಿಂಗ್(1201*), ರಾಹುಲ್ ಚೌಧರಿ(1023*) ಹಾಗೂ ದೀಪಕ್ ನಿವಾಸ್ ಹೂಡಾ(1019*) ಈ ಪಟ್ಟಿಯಲ್ಲಿ ಮೊದಲ 4 ಸ್ಥಾನ ಪಡೆದಿದ್ದಾರೆ.