9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ ಅದ್ದೂರಿ ಚಾಲನೆಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಶುಭಾರಂಭಯು ಮುಂಬಾ ಎದುರು 14 ಅಂಕಗಳ ಗೆಲುವು ಸಾಧಿಸಿದ ದಬಾಂಗ್ ಡೆಲ್ಲಿ
ನವೀನ್ ಕೊಡಸೆ
ಬೆಂಗಳೂರು(ಅ.07): ಚಾಂಪಿಯನ್ ತಂಡದಂತೆಯೆ ಕಾದಾಡಿದ ದಬಾಂಗ್ ಡೆಲ್ಲಿ ತಂಡವು 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಯು ಮುಂಬಾ ತಂಡವನ್ನು 41-27 ಅಂಕಗಳಿಂದ ಮಣಿಸುವ ಮೂಲಕ ಶುಭಾರಂಭ ಮಾಡಿದೆ. ಸೂಪರ್ 10 ಸಾಧನೆ ಮಾಡುವ ಮೂಲಕ ನಾಯಕ ನವೀನ್ ಕುಮಾರ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಟಾಸ್ ಗೆದ್ದ ದಬಾಂಗ್ ಡೆಲ್ಲಿ ತಂಡವು ಮೊದಲು ಡಿಫೆನ್ಸ್ ಆಯ್ದುಕೊಂಡಿತು. ಪಂದ್ಯದ ಎರಡನೇ ನಿಮಿಷದಲ್ಲಿ ಸಂದೀಪ್ ದುಲ್ ಡಬಲ್ ಟ್ಯಾಕಲ್ ಮಾಡುವ ಮೂಲಕ ಯು ಮುಂಬಾಗೆ ಟೂರ್ನಿಯಲ್ಲಿ ಅಂಕಗಳ ಖಾತೆ ತೆರೆದರು. ಇದರ ಬೆನ್ನಲ್ಲೆ ಡೆಲ್ಲಿ ನಾಯಕ ನವೀನ್ ಕುಮಾರ್ ರೈಡಿಂಗ್‌ನಲ್ಲಿ ಅಂಕಗಳಿಸುವ ಮೂಲಕ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆರನೇ ನಿಮಿಷದಲ್ಲಿನ ಡು ಆರ್ ಡೈ ರೈಡ್‌ನಲ್ಲಿ ನವೀನ್ ಕುಮಾರ್ ಅಂಕಗಳಿಸುವ ಮೂಲಕ ಅಂಕಗಳ ಅಂತರವನ್ನು 6-2ಕ್ಕೆ ಹೆಚ್ಚಿಸಿದರು. 9ನೇ ನಿಮಿಷದಲ್ಲಿ ಯು ಮುಂಬಾವನ್ನು ಆಲೌಟ್ ಮಾಡುವ ಮೂಲಕ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವು 11-2 ಅಂತರದ ಮುನ್ನಡೆ ಸಾಧಿಸಿತು. ನಾಯಕನ ಆಟವಾಡುವ ಮೂಲಕ ನವೀನ್ ಕುಮಾರ್ ತಂಡಕ್ಕೆ ಆಸರೆಯಾದರು. ಮೊದಲಾರ್ಧದ ಅಂತ್ಯದ ವೇಳೆಗೆ ದಬಾಂಗ್ ಡೆಲ್ಲಿ ತಂಡವು 19-10 ಅಂಕಗಳ ಮುನ್ನಡೆ ಸಾಧಿಸಿತು.
ಇನ್ನು ದ್ವಿತಿಯಾರ್ಧದಲ್ಲಿ ಯು ಮುಂಬಾ ತಂಡವು ಆರಂಭಿಕ ಎರಡು ಅಂಕಗಳನ್ನು ಗಳಿಸುವ ಮೂಲಕ ಹಾಲಿ ಚಾಂಪಿಯನ್ನರಿಗೆ ತಿರುಗೇಟು ನೀಡುವ ಯತ್ನ ಮಾಡಿತು. ಆದರೆ ಮತ್ತೆ ನವೀನ್ ಕುಮಾರ್ ಬೋನಸ್ ಅಂಕ ಹೆಕ್ಕುವ ಮೂಲಕ ಅಂತರವನ್ನು ಹಿಗ್ಗಿಸುತ್ತಲೇ ಸಾಗಿದರು. ದ್ವಿತಿಯಾರ್ಧದ 10ನೇ ನಿಮಿಷದಲ್ಲಿ ಆಲೌಟ್ ಭೀತಿಗೆ ಸಿಲುಕಿದ್ದ ಯು ಮುಂಬಾ ತಂಡವು, ಸ್ಟಾರ್ ರೈಡರ್ ನವೀನ್ ಕುಮಾರ್ ಅವರನ್ನು ಸೂಪರ್ ಟ್ಯಾಕಲ್ ಮಾಡುವ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡುವ ಯತ್ನ ನಡೆಸಿತು. ಆದರೆ ಇದಾಗಿ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಯು ಮುಂಬಾ ತಂಡವು ಆಲೌಟ್ ಆಯಿತು. ಇದಾದ ನಂತರವೂ ರೈಡಿಂಗ್ ಹಾಗೂ ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಮೆರೆದ ಡೆಲ್ಲಿ ತಂಡವು 14 ಅಂಕಗಳ ಅಂತರದಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಪ್ರೊ ಕಬಡ್ಡಿ ಟೂರ್ನಿಗೆ ಭರ್ಜರಿ ಚಾಲನೆ:
ಕೋವಿಡ್ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಪ್ರೇಕ್ಷಕರು ಮೈದಾನ ಪ್ರವೇಶಿಸಿ ಪಂದ್ಯ ವೀಕ್ಷಿಸುವ ಅವಕಾಶದಿಂದ ವಂಚಿತರಾಗಿದ್ದರು. ಆದರೆ ಈ ಬಾರಿ ಸ್ಟೇಡಿಯಂಗೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರಿಂದ ಕಬಡ್ಡಿ ಅಭಿಮಾನಿಗಳು ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಕಬಡ್ಡಿ ವೈಭವವನ್ನು ಕಣ್ತುಂಬಿಕೊಂಡರು.
ರಾಷ್ಟ್ರಗೀತೆ ಹಾಡಿ ಟೂರ್ನಿಗೆ ಚಾಲನೆ ನೀಡಿದ ವನ್ಷಿಕಾ: ನಮ್ಮಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ವನ್ಷಿಕಾ ಅಂಜನಿ ಕಶ್ಯಪ್ ರಾಷ್ಟ್ರಗೀತೆ ಹಾಡುವ ಮೂಲಕ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಚಾಲನೆ ನೀಡಿದರು.
ಇನ್ನು ಸ್ಯಾಂಡಲ್‌ವುಡ್‌ನ ಖ್ಯಾತ ನಟ ಡಾಲಿ ಧನಂಜಯ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಮಾಸ್ಟರ್ ಆನಂದ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಪಂದ್ಯವನ್ನು ಕಣ್ತುಂಬಿಕೊಂಡರು.
