Asianet Suvarna News Asianet Suvarna News

Pro Kabaddi League ಮತ್ತೊಂದು ಥ್ರಿಲ್ಲರ್ ಪಂದ್ಯ ಗೆದ್ದ ಬೆಂಗಳೂರು ಬುಲ್ಸ್‌

ಜೈಪುರ ಪಿಂಕ್ ಪ್ಯಾಂಥರ್ಸ್‌ ಎದುರು ರೋಚಕ ಜಯ ಸಾಧಿಸಿದ ಬೆಂಗಳೂರು ಬುಲ್ಸ್‌
ಕೊನೆಯ ಕ್ಷಣದಲ್ಲಿ ಗೆಲುವಿನ ನಗೆ ಬೀರಿದ ಬುಲ್ಸ್‌ ಪಡೆ
ಕೊನೆಯಲ್ಲಿ ಬುಲ್ಸ್‌ ಪಾಲಿಗೆ ಹೀರೋ ಆದ ವಿಕಾಸ್ ಖಂಡೋಲಾ

Pro Kabaddi League Bengaluru Bulls clinch another Victory in Pune kvn
Author
First Published Oct 31, 2022, 8:52 AM IST

ಪುಣೆ(ಅ.31): ಸತತ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಕೊನೆ ಕ್ಷಣದಲ್ಲಿ ಎದುರಾಳಿಯಿಂದ ಗೆಲುವನ್ನು ಕಸಿದುಕೊಂಡಿದೆ. ಭಾನುವಾರ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 37-31ರಲ್ಲಿ ಗೆದ್ದ ಬುಲ್ಸ್‌, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಪಂದ್ಯ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿ ಇದ್ದಾಗ ಉಭಯ ತಂಡಗಳು 30-30ರಲ್ಲಿ ಸಮಬಲ ಸಾಧಿಸಿದ್ದವು. ಕೊನೆ 30 ಸೆಕೆಂಡ್‌ ಬಾಕಿ ಇದ್ದಾಗ ಜೈಪುರದ ಮೂರು ಡಿಫೆಂಡರ್‌ಗಳನ್ನು ವಿಕಾಸ್‌ ಖಂಡೋಲಾ ಔಟ್‌ ಮಾಡಿದರು. ಇದರ ಪರಿಣಾಮ ಜೈಪುರ ಆಲೌಟ್‌ ಆಗಿ ಒಂದೇ ರೈಡ್‌ನಲ್ಲಿ ಬುಲ್ಸ್‌ಗೆ 5 ಅಂಕ ಬಿಟ್ಟುಕೊಟ್ಟಿತು. ಶನಿವಾರ ದಬಾಂಗ್‌ ಡೆಲ್ಲಿ ವಿರುದ್ಧವೂ ಬುಲ್ಸ್‌ ಕೊನೆ ನಿಮಿಷದಲ್ಲಿ ಜಯ ಸಾಧಿಸಿತ್ತು.

ದಬಾಂಗ್‌ ಡೆಲ್ಲಿ ವಿರುದ್ಧದ ಗೆಲುವನ್ನು ಅಪ್ಪುವಿಗೆ ಅರ್ಪಿಸಿದ ಬೆಂಗಳೂರು ಬುಲ್ಸ್‌!

7ನೇ ನಿಮಿಷದಲ್ಲೇ ಜೈಪುರವನ್ನು ಆಲೌಟ್‌ ಮಾಡಿದ ಬುಲ್ಸ 10-3ರ ಮುನ್ನಡೆ ಪಡೆಯಿತು. ಆದರೆ ಪುಟಿದೆದ್ದ ಜೈಪುರ ಮೊದಲಾರ್ಧದ ಅಂತ್ಯಕ್ಕೆ 19-19ರಲ್ಲಿ ಸಮಬಲ ಸಾಧಿಸಿತು. ದ್ವಿತೀಯಾರ್ಧದಲ್ಲೂ ಎರಡೂ ತಂಡಗಳ ನಡುವೆ ಪ್ರಬಲ ಪೈಪೋಟಿ ಕಂಡು ಬಂತು. ಆದರೂ ಬೆಂಗಳೂರು ಬುಲ್ಸ್‌ ಪಡೆಯನ್ನು ಗೆಲುವಿನೊಂದ ದೂರವಿರಿಸಲು ಜೈಪುರಕ್ಕೆ ಸಾಧ್ಯವಾಗಲಿಲ್ಲ. ಬೆಂಗಳೂರು ಪರ ಭರತ್‌ 10 ರೈಡ್‌ ಅಂಕ ಪಡೆದರೆ, ವಿಕಾಸ್‌ 8 ರೈಡ್‌ ಅಂಕ ಪಡೆದರು.

ಭಾನುವಾರದ 2ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ ತಮಿಳ್‌ ತಲೈವಾಸ್‌ 49-39ರಲ್ಲಿ ಗೆಲುವು ಸಾಧಿಸಿತು. ತಲೈವಾಸ್‌ಗಿದು ಸತತ 2ನೇ ಜಯ. ಡೆಲ್ಲಿಗೆ ಸತತ 2ನೇ ಸೋಲು. ತಮಿಳ್ ತಲೈವಾಸ್ ತಂಡದ ಪರ ಅತ್ಯದ್ಭುತ ಪ್ರದರ್ಶನ ತೋರಿದ ನರೇಂದರ್ 24 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ದ ತಮಿಳ್ ತಲೈವಾಸ್ ತಂಡವು ರೈಡಿಂಗ್ ಹಾಗೂ ಡಿಫೆನ್ಸ್‌ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು. ಮೊದಲಾರ್ಧದ ಅಂತ್ಯದ ವೇಳೆಗೆ ತಮಿಳ್ ತಲೈವಾಸ್ ತಂಡವು 32-11 ಅಂಕಗಳ ಮುನ್ನಡೆ ಗಳಿಸಿತ್ತು. ಇನ್ನು ಇದಾದ ಬಳಿಕ ದ್ವಿತಿಯಾರ್ಧದಲ್ಲಿ ದಬಾಂಗ್ ಡೆಲ್ಲಿ ತಂಡವು 28 ಅಂಕಗಳನ್ನು ಕಲೆಹಾಕಿತಾದರೂ, ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ನಾಯಕ ನವೀನ್ ಕುಮಾರ್ 11 ರೈಡ್ ನಡೆಸಿ ಕೇವಲ 5 ಅಂಕ ಗಳಿಸಿದ್ದು ಡೆಲ್ಲಿ ತಂಡಕ್ಕೆ ಹಿನ್ನೆಡೆಯಾಗಿ ಪರಿಣಮಿಸಿತು.

ಇಂದಿನ ಪಂದ್ಯಗಳು: 
ಗುಜರಾತ್‌-ಪಾಟ್ನಾ, ಸಂಜೆ 7.30ಕ್ಕೆ
ಯು.ಪಿ.ಯೋಧಾಸ್‌-ತೆಲುಗು ಟೈಟಾನ್ಸ್‌, ರಾತ್ರಿ 8.30ಕ್ಕೆ

Follow Us:
Download App:
  • android
  • ios