ಪ್ರೋ ಕಬಡ್ಡಿ 9ನೇ ಆವೃತ್ತಿ ಪಂದ್ಯ ಆರಂಭಗೊಂಡ ಎರಡನೇ ದಿನಕ್ಕೆ ರೋಚಕ ಟೈ ಮ್ಯಾಚ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಪಾಟ್ನಾ ಹಾಗೂ ಪುಣೇರಿ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಅ.08): ಪ್ರೋ ಕಬಡ್ಡಿ ಲೀಗ್‌ನ ಎರಡನೇ ದಿನದ ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಹಾಗೂ ಪುಣೇರಿ ಪಲ್ಟನ್‌ 35-35 ಅಂಕಗಳಿಂದ ಸಮಬಲ ಸಾಧಿಸಿದೆ. ಇದು ಈ ಆವೃತ್ತಿಲ್ಲಿ ಟೈ ಆದ ಮೊದಲ ಪಂದ್ಯವಾಗಿದೆ. ಪ್ರಥಮಾರ್ಧದಲ್ಲಿ 23-16ರಿಂದ ಮುನ್ನಡೆ ಕಂಡಿದ್ದ ಪುಣೇರಿ ಪಲ್ಟನ್‌ ದ್ವಿತಿಯಾರ್ಧದಲ್ಲಿ ಆ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ನಡುವೆ ಆಲೌಟ್‌ ಆದದ್ದು ತಂಡದ ಮನೋಬಲ ಕುಸಿಯಲು ಕಾರಣವಾಯಿತು. ಪಾಟ್ನಾ ಪೈರೇಟ್ಸ್‌ ಎದುರಾಳಿಗೆ ಏಳು ಬೋನಸ್‌ ಅಂಕಗಳನ್ನು ನೀಡಿದ್ದು ಜಯದಿಂದ ವಂಚಿತವಾಗಲು ಪ್ರಮುಖ ಕಾರಣವಾಯಿತು.

ಪಾಟ್ನಾ ಪೈರೇಟ್ಸ್‌ ಪರ ಸಚಿನ್‌ ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿದರೆ, ರೋಹಿತ್‌ ಗೂಲಿಯಾ 6 ಅಂಕಗಳನ್ನು ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ತ್ಯಾಗರಾಜನ್‌ ಹಾಗೂ ಸುನಿಲ್‌ ಸೇರಿ ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಗಳಿಸಿದರು. ಪುಣೇರಿ ಪಲ್ಟನ್‌ ಪರ ಅಸ್ಲಾಮ್‌ ಇನಾಮ್ದಾರ್‌ 7, ಮೋಹಿತ್‌ ಗೊಯತ್‌ 8 ಹಾಗೂ ಆಕಾಶ್‌ ಶಿಂಧೆ 6 ರೈಡಿಂಗ್‌ ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಬಾದಲ್‌ ಸಿಂಗ್‌ ಮತ್ತು ಅಲಂಕಾರ್‌ ಪಾಟಿಲ್‌ ಟ್ಯಾಕಲ್‌ನಲ್ಲಿ ಒಟ್ಟು 5 ಅಂಕಗಳನ್ನು ಗಳಿಸಿದರು. ದ್ವಿತಿಯಾರ್ಧದ ಆರಂಭದಿಂದಲೇ ಪಾಟ್ನಾ ಪೈರೇಟ್ಸ್‌ ಆಕ್ರಮಣಕಾರಿ ಆಟ ಆರಂಭಿಸಿತು. ರೈಡಿಂಗ್‌ನಲ್ಲಿ ಸಚಿನ್‌ ಹಾಗೂ ವಿಶ್ವಾಸ ನಿರಂತರ ಯಶಸ್ಸು ಕಂಡರು. ಪರಿಣಾಮ ಪುಣೇರಿ ಪಲ್ಟನ್‌ ಆಲೌಟ್‌, ಈ ಹಂತದಲ್ಲಿ ಪಾಟ್ನಾ ಪೈರೇಟ್ಸ್‌ 26-24 ಅಂತರದಲ್ಲಿ ಮುನ್ನಡೆ ಕಂಡಿತು. ಸಚಿನ್‌ ಹಾಗೂ ರೋಹಿರ್‌ ಗೂಲಿಯಾ ತಂಡದ ಮುನ್ನಡೆಗೆ ನೆರವಾದರು.

ತೆಲುಗು ಟೈಟಾನ್ಸ್‌ಗೆ ಡಿಚ್ಚಿ ಹೊಡೆದ ಬೆಂಗಳೂರಿನ ಗೂಳಿಗಳು..!

ಆದರೆ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ, ಉತ್ತಮ ರೈಡಿಂಗ್‌ ಮೂಲಕ ತಿರುಗೇಟು ನೀಡಿದ ಪುಣೇರಿ ಪಲ್ಟನ್‌ 30-30ರಲ್ಲಿ ಸಮಬಲಗೊಳಿಸಿತು. ನಿರಂತರ ಬೋನಸ್‌ ಅಂಕಗಳನ್ನು ಗಳಿಸಿದ ಪುಣೇರಿ ಪಲ್ಟನ್‌ ಒಂದು ಪಂದ್ಯ ಮುಗಿಯಲು ನಾಲ್ಕು ನಿಮಿಷ ಬಾಕಿ ಇರುವಂತೆ 32-31ರಲ್ಲಿ ಮೇಲುಗೈ ಸಾಧಿಸಿತು.

ಪ್ರಥಮಾರ್ಧದಲ್ಲಿ ಪುಣೇರಿ ಪಲ್ಟಾನ್‌ ಮುನ್ನಡೆ:
ಮೂರು ಬಾರಿ ಚಾಂಪಿಯನ್‌ ತಂಡ ಪಾಟ್ನಾ ಪೈರೇಟ್ಸ್‌ ಆರಂಭದಲ್ಲಿ ಉತ್ತಮ ರೀತಿಯಲ್ಲೇ ಮುನ್ನಡೆ ಕಂಡಿತ್ತು, ಪಂದ್ಯದ 10ನೇ ನಿಮಿಷದಲ್ಲಿ ಪುಣೇರಿ ಪಲ್ಟನ್‌ ಆಲೌಟ್‌ ಆಗುವ ಮೂಲಕ ಪಾಟ್ನಾ ಪೈರೇಟ್ಸ್‌ 12-9ರ ಅಂತರದಲ್ಲಿ ಮುನ್ನಡೆ ಕಂಡಿತ್ತು. ಆದರೆ ಆ ನಂತರ ಪಾಟ್ನಾ ಪೈರೇಟ್ಸ್‌ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು. ನಿತರಂತರವಾಗಿ ಎದುರಾಳಿ ತಂಡಕ್ಕೆ ಅಂಕಗಳನ್ನು ನೀಡಿತು. ಆ ಮೂಲಕ ಪಾಟ್ನಾ ಪೈರೇಟ್ಸ್‌ ಕೂಡ ಆಲೌಟ್‌ ಆಗಿ ಪ್ರಥಮಾರ್ಧದಲ್ಲಿ 16-23 ಪುಣೇರಿ ಪಲ್ಟನ್‌ ಮೇಲುಗೈ ಸಾಧಿಸಿತು. ಪುಣೇರಿ ಪಲ್ಟನ್‌ ರೈಡಿಂಗ್‌ನಲ್ಲಿ 14 ಅಂಕಗಳನ್ನು ಗಳಿಸಿದರೆ, ಪಾಟ್ನಾ ಪೈರೇಟ್ಸ್‌ 8 ಅಂಕಗಳನ್ನು ಗಳಿಸಿದ್ದು ಎರಡು ತಂಡಗಳ ನಡುವಿನ ಅಂತರವನ್ನು ಸ್ಪಷ್ಟಪಡಿಸುತ್ತದೆ.

ಮೋಹಿತ್‌ ಗೋಯತ್‌ ರೈಡಿಂಗ್‌ನಲ್ಲಿ 8 ಅಂಕಗಳನ್ನು ಗಳಿಸಿ ಪುಣೇರಿ ಪಲ್ಟನ್‌ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಆಕಾಶ್‌ ಶಿಂಧೆ 4 ಅಂಕಗಳನ್ನು ಗಳಿಸಿ ಮುನ್ನಡೆಗೆ ನೆರವಾದರು. ಪಾಟ್ನಾ ಪೈರೇಟ್ಸ್‌ ಪರ ಸಚಿನ್‌ 3 ಅಂಕಗಳನ್ನು ಗಳಿಸಿದೆ, ಕನ್ನಡಿಗ ವಿಶ್ವಾಸ್‌ ಎರಡು ಅಂಕಗಳನ್ನು ಗಳಿಸಿದರು. ಹೆಚ್ಚಾಗಿ ಯುವ ಆಟಗಾರರಿಂದ ಕೂಡಿರುವ ಪಾಟ್ನಾ ಪೈರೇಟ್ಸ್‌ ರೈಡಿಂಗ್‌ನಲ್ಲಿ ಹಿನ್ನಡೆ ಕಂಡಿರುವುದು ಸ್ಪಷ್ಟವಾಗಿತ್ತು. ತಂಡ ಹೆಚ್ಚಾಗಿ ಸಚಿನ್‌ ಅವರನ್ನೇ ಹೊಂದಿಕೊಂಡಿದೆ.

ಪ್ರೊ ಕಬಡ್ಡಿ ಟೂರ್ನಿಗೆ ಭರ್ಜರಿ ಚಾಲನೆ, ದಬಾಂಗ್ ಡೆಲ್ಲಿ ಶುಭಾರಂಭ

ಕನ್ನಡಿಗರ ಮುಖಾಮುಖಿ: ಪಾಟ್ನಾ ಪೈರೇಟ್ಸ್‌ ಹಾಗೂ ಪುಣೇರಿ ಪಲ್ಟನ್‌ ತಂಡಗಳನ್ನು ಗಮನಿಸಿದಾಗ ಅದು ಕನ್ನಡಿಗರ ಮುಖಾಮುಖಿ ಎಂಬುದು ಸ್ಪಷ್ಟವಾಗುತ್ತದೆ. ಪುಣೇರಿ ಪಲ್ಟನ್‌ ತಂಡದ ಕೋಚ್‌ ಬಿ ಸಿ ರಮೇಶ್‌ ಹಾಗೂ ಪಾಟ್ನಾ ಪೈರೇಟ್ಸ್‌ ತಂಡದ ಕೋಚ್‌ ರವಿ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಟ್ನಾ ಪೈರೇಟ್ಸ್‌ ತಂಡದಲ್ಲಿ ಮಂಡ್ಯದ ವಿಶ್ವಾಸ್‌ ಹಾಗೂ ಭಟ್ಕಳದ ರಂಜಿತ್‌ ನಾಯ್ಕ್‌ ಆಟಗಾರರಾಗಿರುತ್ತಾರೆ.