ಪುಣೆ(ಅ.22): ಕೊನೆಯ ಕ್ಷಣದವರೆಗೂ ರೋಚಕತೆ ಕಾಯ್ದುಕೊಂಡ ಪಂದ್ಯದಲ್ಲಿ ಪುಣೇರಿ ಪಲ್ಟನ್ 27-25 ರಿಂದ ಬೆಂಗಳೂರು ಬುಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ ಪುಣೆ ತಂಡ ತವರಿನ ಅಂಕಣದಲ್ಲಿ ಹ್ಯಾಟ್ರಿಕ್ ಗೆಲುವು ಪಡೆದರೆ, ಬುಲ್ಸ್ ಕೂಟದಲ್ಲಿ ಮೊದಲ ಸೋಲುಂಡಿತು.

ಭಾನುವಾರ ಇಲ್ಲಿ ನಡೆದ ಅಂತರ ವಲಯದ 2ನೇ ಪಂದ್ಯದ ಮೊದಲನೇ ಅವಧಿಯಲ್ಲಿ 13-10 ರಿಂದ ಮುನ್ನಡೆ ಪಡೆದ ಬುಲ್ಸ್ ಎರಡನೇ ಅವಧಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಸೂಚನೆಯನ್ನು ಆರಂಭದಲ್ಲಿಯೇ ನೀಡಿತು. ಪುಣೆ  ಕೋರ್ಟ್‌ನಲ್ಲಿದ್ದ ಆಟಗಾರರನ್ನು ಖಾಲಿ ಮಾಡಿಸತೊಡಗಿತು. ಆದರೆ, ಇದೇ
ಹಂತದಲ್ಲಿ ಬುಲ್ಸ್‌ನ ಇಬ್ಬರು ಆಟಗಾರರು ಕೊನೆಯ ಲೈನ್‌ನ ಟಚ್ ಮಾಡಿ ಹೊರಹೋಗಿದ್ದು ಯಡವಟ್ಟಾಯಿತು.

ಅಂತೂ 29ನೇ ನಿಮಿಷದಲ್ಲಿ ಪುಣೆ ತಂಡವನ್ನು ಆಲೌಟ್ ಮಾಡುವಲ್ಲಿ ಬುಲ್ಸ್ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಬುಲ್ಸ್ 22-20 ರಿಂದ ಮುನ್ನಡೆ ಪಡೆದಿತ್ತು.
ಪಂದ್ಯ ಮುಂದೆ ಏನೂ ಬೇಕಾದರೂ ಆಗಬಹುದಾಗಿತ್ತು. ಅಂಕಗಳಿಕೆಯಲ್ಲೂ ಎರಡು ತಂಡಗಳು ಸಮಬಲದ ಹೋರಾಟ ಪ್ರದರ್ಶಿಸುತ್ತಿದ್ದವು. 

ಪಂದ್ಯ ಮುಗಿಯಲು 5 ನಿಮಿಷ ಇರುವಾಗ ಉಭಯ ತಂಡಗಳು 23-23 ಅಂಕಗಳಿಸಿರುವುದೇ ರೋಚಕ ಹೋರಾಟಕ್ಕೆ ಸಾಕ್ಷಿ. ಇನ್ನೇನು ಬುಲ್ಸ್ ಕೋರ್ಟ್ ಖಾಲಿ ಆಗುತ್ತೆ ಅನ್ನುವಾಗ ಪುಣೆಯ ನಿತೀನ್ ತೋಮರ್ ಸೂಪರ್ ಟ್ಯಾಕಲ್‌ಗೆ ಸಿಲುಕಿ ಬುಲ್ಸ್ ಗೆಜೀವಬಂತು. ಕೊನೆಯ 1 ನಿಮಿಷ ಬಾಕಿ ಇರುವಾಗ ಬುಲ್ಸ್ 25-26 ರಿಂದ ಅಲ್ಪ ಹಿನ್ನಡೆಯಲ್ಲಿತ್ತು. ಕೊನೆಯ ರೈಡಿಂಗ್‌ನಲ್ಲಿ ಕಾಶಿಲಿಂಗ್ ಅಡಕೆ ಔಟ್ ಆಗಿದ್ದು ಬುಲ್ಸ್ ಗೆಲುವಿನ ಓಟಕ್ಕೆ ಅಡ್ಡಿಯಾಯಿತು.

ಬೆಂಗಾಲ್ ವಿರುದ್ದ ಡೆಲ್ಲಿ ಗೆಲುವಿನ ಸಂಭ್ರಮ:
ಅಂತರ ವಲಯದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ 30-29 ಅಂಕಗಳಿಂದ ಗೆಲುವು ಸಾಧಿಸಿತು.ಡೆಲ್ಲಿಯ ಚಂದ್ರನ್ ರಂಜಿತ್‌ರ ಭರ್ಜರಿ ರೈಡಿಂಗ್ ಫಲದಿಂದಾಗಿ ಡೆಲ್ಲಿ ಲೀಗ್‌ನಲ್ಲಿ 2ನೇ ಜಯ ದಾಖಲಿಸಿತು. ಮೊದಲ ಅವಧಿಯಲ್ಲಿ ಡೆಲ್ಲಿ 16-13 ರಿಂದ ಮುನ್ನಡೆ ಪಡೆದುಕೊಂಡು ಆತ್ಮವಿಶ್ವಾಸದಲ್ಲಿತ್ತು. 

ಟರ್ನಿಂಗ್ ಪಾಯಿಂಟ್: ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 25ನೇ ನಿಮಿಷದಲ್ಲಿ ಡೆಲ್ಲಿ ತಂಡದ ಚಂದ್ರನ್ ರಂಜಿತ್ ಸೂಪರ್ ರೈಡ್ ಮಾಡುವ ಮೂಲಕ ಬೆಂಗಾಲ್ ತಂಡವನ್ನು 2ನೇ ಬಾರಿ ಆಲೌಟ್ ಮಾಡಿದ್ದು ಡೆಲ್ಲಿ ಜಯದಲ್ಲಿ ಮಹತ್ವದ ಪಾತ್ರವಹಿಸಿತು.