ಬೆಂಗಳೂರು(ಸೆ.02): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಮುಗ್ಗರಿಸಿದ ತಮಿಳ್ ತಲೈವಾಸ್ ಇದೀಗ ತೆಲುಗು ಟೈಟಾನ್ಸ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಸತತ 2 ಪಂದ್ಯದಲ್ಲಿ ತಮಿಳ್ ತಲೈವಾಸ್ ಸೋಲು ಕಂಡಿದೆ. ತೆಲುಗು ಟೈಟಾನ್ಸ್ ವಿರುದ್ಧದ ರೋಚಕ ಹೋರಾಟದಲ್ಲಿ  ತಮಿಳ್ ತಲೈವಾಸ್ 30-35 ಅಂಕಗಳಿಂದ ಮುಗ್ಗರಿಸಿತು.

ಇದನ್ನೂ ಓದಿ:  PKL 2019: ತವರಿನಲ್ಲಿ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವು!

ಪಂದ್ಯದ ಆರಂಭದಲ್ಲೇ ಸಿದ್ಧಾರ್ಥ್ ದೇಸಾಯಿ ರೈಡ್‌ನಿಂದ ತೆಲುಗು ಟೈಟಾನ್ಸ್ ಅಂಕ ಖಾತೆ ತೆರೆಯಿತು. ಆದರೆ ತಮಿಳ್ ತಲೈವಾಸ್ ಪರ ರಾಹುಲ್ ಚೌಧರಿ ಅಂಕ ತರುವಲ್ಲಿ ವಿಫಲರಾದರು. 3 ನಿಮಿಷದ ಬಳಿಕ ಅಜಿತ್ ಕುಮಾರ್ ಯಶಸ್ವಿ ರೈಡ್‌ನಿಂದ ತಮಿಳ್ ತಲೈವಾಸ್ ಮೊದಲ ಅಂಕ ಸಂಪಾದಿಸಿತು. ಅಂಕಗಳ ಅಂತರ ಹೆಚ್ಚಿಸಿಕೊಂಡ ತೆಲುಗು ಟೈಟಾನ್ಸ್, ಮೇಲುಗೈ ಸಾಧಿಸಿತು. ಮೊದಲಾರ್ಧದ ಅಂತ್ಯದಲ್ಲಿ ತೆಲುಗು 18-14 ಅಂಕಗಳಿಸಿತು.

ಇದನ್ನೂ ಓದಿ: ಬೆಂಗಳೂರು ಬುಲ್ಸ್‌ನ ಓನ್‌ ಮ್ಯಾನ್‌ ಆರ್ಮಿ ಪವನ್‌!

ದ್ವಿತಿಯಾರ್ಧಲ್ಲಿ ತಮಿಳ್ ತಲೈವಾಸ್ ಹೋರಾಟ ಚುರುಕುಗೊಂಡಿತು. ಆದರೆ ರಾಹುಲ್ ಚೌಧರಿ ಎಂದಿನ ಫಾರ್ಮ್‌ನಲ್ಲಿ ಇರಲಿಲ್ಲ. ಖಾಲಿ ರೈಡ್‌ಗಳು ತಮಿಳ್ ತಂಡಕ್ಕೆ ದುಬಾರಿಯಾಯಿತು. ಇದು ತೆಲುಗು ತಂಡಕ್ಕೆ ಸಹಕಾರಿಯಾಯಿತು. ಸೆಕೆಂಡ್ ಹಾಫ್‌ನ 15ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ಆಲೌಟ್‌ಗೆ ತುತ್ತಾಯಿತು. ಈ ಮೂಲಕ ತೆಲುಗು 33-24 ಅಂಕಗಳ ಮುನ್ನಡೆ ಪಡೆಯಿತು. ಪಂದ್ಯದ ಮುಕ್ತಾಯದ ವೇಳೆಗೆ 35-30 ಅಂಕಗಳಿಂದ ತೆಲುಗು ಗೆಲುವು ಸಾಧಿಸಿತು.

ಹರ್ಯಾಣಗೆ ಗೆಲುವಿನ ಸಿಂಚನ:
ತಮಿಳ್ ತಲೈವಾಸ್ ಹಾಗೂ ತೆಲುಗು ಟೈಟಾನ್ಸ್ ನಡುವಿನ ಪಂದ್ಯಕ್ಕೂ ಮೊದಲು ಹರ್ಯಾಣ ಸ್ಟೀಲರ್ಸ್ ಹಾಗೂ ಪುಣೇರಿ ಪಲ್ಟಾನ್ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಹರ್ಯಾಮ 41-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಂದ್ಯದ ಆರಂಭದಲ್ಲೇ ಹಿಡಿತ ಸಾಧಿಸಿದ ಹರ್ಯಾಣ, ಮೊದಲಾರ್ಧದ ಮುಕ್ತಾಯದಲ್ಲಿ 18-11 ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಸೆಕೆಂಡ್ ಹಾಫ್‌ನಲ್ಲಿ ಪುಣೇರಿ ತಿರುಗೇಟು ನೀಡೋ ಪ್ರಯತ್ನಗಳು ಕೈಗೂಡಲಿಲ್ಲ. ಈ ಮೂಲಕ ಹರ್ಯಾಣ 41-27 ಅಂಕಗಳ ಗೆಲುವು ಕಂಡಿತು.