PKL 2019: ಮೈದಾನದಲ್ಲೇ ಕುಸಿದು ಬಿದ್ದ ಸಂದೀಪ್ ನರ್ವಾಲ್!
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿನ ಯು ಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯದಲ್ಲಿ ಕಬಡ್ಡಿ ಪಟು ಸಂದೀಪ್ ನರ್ವಾಲ್ ಕುಸಿದು ಬಿದ್ದ ಘಟನೆ ನಡೆದಿದೆ.
ಬೆಂಗಳೂರು(ಆ.31): ಯು ಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಆಘಾತಕಾರಿ ಘಟನೆ ನಡೆದಿದೆ. ದ್ವಿತಿಯಾರ್ಧದ 17ನೇ ನಿಮಿಷದಲ್ಲಿ ಯು ಮುಂಬಾ ತಂಡದ ಸಂದೀಪ್ ನರ್ವಾಲ್ ಮೈದಾನದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ವೈದ್ಯರ ತಂಡ ನೆರವಿಗೆ ಧಾವಿಸಿ ಚಿಕಿತ್ಸೆ ನೀಡಿತು. ಪ್ರಥಮ ಚಿಕಿತ್ಸೆ ಬಳಿಕ ನರ್ವಾಲ್ ಕೊಂಚ ಚೇತರಿಸಿಕೊಂಡರು.
ಇದನ್ನೂ ಓದಿ: ತವರಿನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಬುಲ್ಸ್
ಜೈಪುರು ವಿರುದ್ಧ ಯು ಮುಂಬಾ ಆಕ್ರಮಣಕಾರಿ ಆಟವಾಡುತ್ತಿತ್ತು. 33-10 ಅಂಕಗಳ ಭರ್ಜರಿ ಮುನ್ನಡೆಯಲ್ಲಿದ್ದ ಯು ಮುಂಬಾ ತಂಡ ಸಂದೀಪ್ ನರ್ವಾಲ್ ಘಟನೆಯಿಂದ ಬೆಚ್ಚಿ ಬಿದ್ದಿತು. ಮೈದಾನದಲ್ಲಿ ಪ್ರಜ್ಞೆ ತಪ್ಪಿದ ಸಂದೀಪ್ ನರ್ವಾಲ್, ಕುಸಿದು ಬಿದ್ದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಥಮ ಚಿಕಿತ್ಸೆ ಬಳಿಕ ಕೊಂಚ ಚೇತರಿಸಿಕೊಂಡ ಸಂದೀಪ್ ನರ್ವಾಲ್ ವಿಶ್ರಾಂತಿಗೆ ಜಾರಿದ್ದಾರೆ.
ಪಂದ್ಯದಲ್ಲಿ ಅಬ್ಬರಿಸಿದ ಯು ಮುಂಬಾ 47-21 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.