PKL7: ಶುಭಾರಂಭದ ಬೆನ್ನಲ್ಲೇ ಬೆಂಗಳೂರು ಬುಲ್ಸ್‌ಗೆ ಆಘಾತ !
ಪ್ರೋ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್‌ಗೆ ಆಘಾತ ಎದುರಾಗಿದೆ. ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಅಬ್ಬರಿಸಿದ್ದ ಬೆಂಗಳೂರು 2ನೇ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ.
ಹೈದರಾಬಾದ್(ಜು.21): ಪ್ರೋ ಕಬಡ್ಡಿ 7ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್, ಎರಡನೇ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ಗುಜರಾತ್ ಫೂರ್ಚೂನ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮುಗ್ಗರಿಸಿದೆ. ಬುಲ್ಸ್ ವಿರುದ್ಧ ಸವಾರಿ ಮಾಡಿದ ಗುಜರಾತ್ 42-24 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.
"
ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ ಹೋರಾಟಕ್ಕಿಳಿದ ಬೆಂಗಳೂರು ಬುಲ್ಸ್ ಮೊದಲಾರ್ಧದಲ್ಲಿ ನಿರೀಕ್ಷಿತ ಹೋರಾಟ ನೀಡಲಿಲ್ಲ. ನಾಯಕ ರೋಹಿತ್ ಕುಮಾರ್ ಸೇರಿದಂತೆ ಬುಲ್ಸ್ ರೈಡರ್‌ಗಳು ಅಂಕ ತರುವಲ್ಲಿ ವಿಫಲರಾದರು. ಹೀಗಾಗಿ ಆರಂಭಿಕ 4 ನಿಮಿಷದಲ್ಲಿ ಗುಜರಾತ್ 3 ಅಂಕ ಸಂಪಾದಿಸಿದರೆ, ಬುಲ್ಸ್ ಅಂಕ ಖಾತೆ ತೆರಯದೇ ಪರದಾಡಿತು.
ಬುಲ್ಸ್ ತಂಡದ ಮಹೇಂದ್ರ ಸಿಂಗ್ ಸೂಪರ್ ಟ್ಯಾಕಲ್‌ನಿಂದ 4-4 ಅಂಕ ಸಮಬಲ ಮಾಡಿಕೊಂಡರೂ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಗುಜರಾತ್ ಮಿಂಚಿನ ಆಟದಿಂದ ಅಂಕ ಕಲೆಹಾಕಿತು. ಮೊದಲಾರ್ಧದ ಅಂತ್ಯದಲ್ಲಿ ಗುಜರಾತ್ ಅಂಕಗಳ ಮುನ್ನಡೆ ಪಡೆಯಿತು. ದ್ವಿತಿಯಾರ್ಧದಲ್ಲೂ ಬೆಂಗಳೂರು ಬುಲ್ಸ್ ಹೋರಾಟ ನಡೆಯಲಿಲ್ಲ. ಹೀಗಾಗಿ ಗುಜರಾತ್ 42-24 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.