ಪ್ರೊ ಕಬಡ್ಡಿ 6ನೇ ಆವೃತ್ತಿ ತೆಲುಗು ಟೈಟಾನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು.  ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಾಲ್ ರೋಚಕ ಗಲುವಿನ ನಗೆ ಬೀರಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಸೋನೆಪತ್(ಅ.17): ಬೆಂಗಾಲ್‌ ವಾರಿಯ​ರ್ಸ್ ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಮಂಗಳವಾರ ಇಲ್ಲಿ ನಡೆದ ‘ಎ’ ವಲಯದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 30-25 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

Add Asianetnews Kannada as a Preferred SourcegooglePreferred

ಮಣೀಂದರ್‌ ಸಿಂಗ್‌ ಆಕರ್ಷಕ ರೈಡಿಂಗ್‌ ನಡೆಸಿ 11 ಅಂಕ ಗಳಿಸುವ ಮೂಲಕ ಬೆಂಗಾಲ್‌ ಗೆಲುವಿನ ರೂವಾರಿಯಾದರು. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ತೆಲುಗು ಟೈಟಾನ್ಸ್‌ ಹಲವು ಅವಕಾಶಗಳನ್ನು ಕೈಚೆಲ್ಲಿ ನಿರಾಸೆ ಅನುಭವಿಸಿತು. ತಂಡದ ತಾರಾ ಆಟಗಾರ ರಾಹುಲ್‌ ಚೌಧರಿ ಕೇವಲ 2 ಬೋನಸ್‌ ಅಂಕ ಗಳಿಸಲಷ್ಟೇ ಶಕ್ತರಾದರು. 12 ಬಾರಿ ರೈಡ್‌ ನಡೆಸಿದ ರಾಹುಲ್‌ 5 ಬಾರಿ ಔಟ್‌ ಆದರೆ, ಇನ್ನೈದು ಬಾರಿ ಖಾಲೆ ಕೈಯಲ್ಲಿ ತಮ್ಮ ಅಂಕಣಕ್ಕೆ ಮರಳಿದರು. ಪಂದ್ಯದಲ್ಲಿ ಸೋಲುಂಡರೂ, ಟೈಟಾನ್ಸ್‌ ‘ಬಿ’ ವಲಯದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಬೆಂಗಾಲ್‌ ವಾರಿಯ​ರ್‍ಸ್ 2ನೇ ಸ್ಥಾನಕ್ಕೇರಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳು ನಿಧಾನ ಆರಂಭ ಪಡೆದುಕೊಂಡವು. ಟೈಟಾನ್ಸ್‌ನ ರಕ್ಷಣಾ ಪಡೆಯನ್ನು ಮುನ್ನಡೆಸಿದ ಅಬೋಜರ್‌ ಮಿಘಾನಿ ಅಂಕ ಗಳಿಕೆಯಲ್ಲಿ ಮುನ್ನಡೆದರು. ಟೈಟಾನ್ಸ್‌ 2-0 ಆರಂಭಿಕ ಮುನ್ನಡೆ ಗಳಿಸಿತು. 3ನೇ ನಿಮಿಷದಲ್ಲಿ ಬೆಂಗಾಲ್‌ ಅಂಕ ಖಾತೆ ತೆರೆಯಿತು.

ಆದರೆ 5ನೇ ನಿಮಿಷದಲ್ಲಿ ಜಾನ್‌ ಕುನ್‌ ಲೀ ಬೆಂಗಾಲ್‌ 5-4ರ ಮುನ್ನಡೆ ಪಡೆಯಲು ನೆರವಾದರು. 14ನೇ ನಿಮಿಷದಲ್ಲಿ ಉಭಯ ತಂಡಗಳು 9-9ರಲ್ಲಿ ಸಮಬಲ ಸಾಧಿಸಿದವು. ಮೊದಲಾರ್ಧದ ಅಂತ್ಯಕ್ಕೆ ತೆಲುಗು ಟೈಟಾನ್ಸ್‌ 13-10ರ ಅಲ್ಪ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದಲ್ಲೂ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿ ಅಂಕ ಗಳಿಸಿದವು. ಆದರೆ 32ನೇ ನಿಮಿಷದಲ್ಲಿ ಮಣೀಂದರ್‌ ಸಿಂಗ್‌ 2 ಅಂಕ ಗಳಿಸಿ ಬೆಂಗಾಲ್‌ ವಾರಿಯ​ರ್‍ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಟೈಟಾನ್ಸ್‌ ಆಲೌಟ್‌ ಮಾಡಿದ ಬೆಂಗಾಲ್‌ 19-17ರ ಮುನ್ನಡೆ ಪಡೆಯಿತು. 33ನೇ ನಿಮಿಷದಲ್ಲಿ ರಾಹುಲ್‌ ಚೌಧರಿಯನ್ನು ಹೊರಗಟ್ಟಿದ ವಾರಿಯ​ರ್‍ಸ್, ಹಿಡಿತವನ್ನು ಮತ್ತಷ್ಟುಬಿಗಿಗೊಳಿಸಿತು.

34ನೇ ನಿಮಿಷದಲ್ಲಿ 2 ಅಂಕ ಮುನ್ನಡೆ ಹೊಂದಿದ್ದ ಬೆಂಗಾಲ್‌, ರಕ್ಷಣಾ ಪಡೆ ಗಳಿಸಿದ 3 ಟ್ಯಾಕಲ್‌ ಅಂಕಗಳ ನೆರವಿನಿಂದ ಅಂತಿಮ 3 ನಿಮಿಷ ಬಾಕಿ ಇದ್ದಾಗ 26-21ರ ಮುನ್ನಡೆಯೊಂದಿಗೆ ಜಯದತ್ತ ಹೆಜ್ಜೆ ಹಾಕಿತು.

39ನೇ ನಿಮಿಷದಲ್ಲಿ ಟೈಟಾನ್ಸ್‌ ಡಿಫೆಂಡರ್‌ಗಳು ಮಣೀಂದರ್‌ ಸಿಂಗ್‌ ಔಟ್‌ ಮಾಡಿ ಅಂತರವನ್ನು 25-27ಕ್ಕಿಳಿಸಿದರು. ಆದರೆ ರಾಹುಲ್‌ ಚೌಧರಿ ಸುವರ್ಣ ಅವಕಾಶವನ್ನು ಕೈಚೆಲ್ಲಿ ಟೈಟಾನ್ಸ್‌ಗೆ ಹಿನ್ನಡೆ ಉಂಟು ಮಾಡಿದರು. ಇದರಿಂದಾಗಿ ಬೆಂಗಾಲ್‌ಗೆ 2 ಅಂಕ ದೊರೆಯಿತು. ಅಂತಿಮವಾಗಿ 5 ಅಂಕಗಳ ಅಂತರದಲ್ಲಿ ಬೆಂಗಾಲ್‌ ಜಯಗಳಿಸಿತು.

ಟರ್ನಿಂಗ್‌ ಪಾಯಿಂಟ್‌:
ಪಂದ್ಯದ ಪಂದ್ಯದ ಕೊನೆ ನಿಮಿಷದಲ್ಲಿ ರಾಹುಲ್‌ ಚೌಧರಿ ಮಾಡಿದ ಎಡವಟ್ಟಿನಿಂದಾಗಿ ಬೆಂಗಾಲ್‌ ವಾರಿಯ​ರ್‍ಸ್ಗೆ ಸೂಪರ್‌ ಟ್ಯಾಕಲ್‌ ದೊರೆಯಿತು. 2 ಅಂಕ ಪಡೆದ ವಾರಿಯ​ರ್‍ಸ್ ಗೆಲುವನ್ನು ಖಚಿತ ಪಡಿಸಿಕೊಂಡಿತು.


ಮಲ್ಲಪ್ಪ ಸಿ.ಪಾರೇಗಾಂವ