ಚೆನ್ನೈ[ಅ.08]: ಹರ್ಯಾಣ ಸ್ಟೀಲರ್ಸ್ ಎದುರು ಸಂಘಟಿತ ಪ್ರದರ್ಶನ ತೋರಿದ ಪುಣೇರಿ ಪಲ್ಟಾನ್ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸ್ಟೀಲರ್ಸ್ ಎದುರು 22-34 ಅಂಕಗಳಿಂದ ಪಲ್ಟಾನ್ ಗೆಲುವಿನ ನಗೆ ಬೀರಿತು.

ಕಳೆದ ಪಂದ್ಯದಲ್ಲಿ ಯು ಮುಂಬಾ ಎದುರು ರೋಚಕ ಡ್ರಾ ಸಾಧಿಸಿದ್ದ ಗಿರೀಶ್ ಎರ್ನಾಕ್ ನೇತೃತ್ವದ ಪುಣೇರಿ ಪಲ್ಟಾನ್ ಎರಡನೇ ಪಂದ್ಯದಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿತು. ಮೊದಲಾರ್ಧದ 15ನೇ ನಿಮಿಷದಲ್ಲಿ ಉಭಯ ತಂಡಗಳು 8-8 ಅಂಕಗಳ ಸಮಬಲ ಸಾಧಿಸಿದ್ದವು. ಆದರೆ ಮೊದಲಾರ್ಧ ಮುಕ್ತಾಯಕ್ಕೆ ಕೆಲವೇ ಕ್ಷಣಗಳಿದ್ದಾಗ ಪಲ್ಟಾನ್ ತಂಡದ ಸ್ಟಾರ್ ರೈಡರ್ ನಿತಿನ್ ತೋಮರ್ ಹರ್ಯಾಣ ಸ್ಟೀಲರ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಆರಂಭಿಕ ಮುನ್ನಡೆ ತಂದುಕೊಟ್ಟರು. ಹೀಗಾಗಿ ಮೊದಲಾರ್ಧ ಮುಕ್ತಾಯದ ವೇಳೆಗೆ ಪುಣೇರಿ ಪಲ್ಟಾನ್ 15-09 ಅಂಕಗಳ ಮುನ್ನಡೆ ಸಾಧಿಸಿತ್ತು.

ಇನ್ನು ದ್ವಿತಿಯಾರ್ಧದಲ್ಲಿ ಆಕರ್ಷಕ ರೈಡಿಂಗ್ ಹಾಗೂ ಬಲಿಷ್ಠ ಡಿಫೆನ್ಸ್ ಮೂಲಕ ಎದುರಾಳಿ ತಂಡವನ್ನು ತಬ್ಬಿಬ್ಬುಗೊಳಿಸಿದ ಪಲ್ಟಾನ್ ನಿಚ್ಚಳ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಸಾಗಿತು. ಕೊನೆವರೆಗೂ ತಿರುಗೇಟು ನೀಡುವ ಸ್ಟೀಲರ್ಸ್ ಯತ್ನ ಫಲಕೊಡಲಿಲ್ಲ. ಹೀಗಾಗಿ ಪಲ್ಟಾನ್ 12 ಅಂಕಗಳ ಅಂತರದ ಭರ್ಜರಿ ಜಯ ದಾಖಲಿತು.