2014ರಲ್ಲಿ ಚೀನಾ ಓಪನ್ ಚಾಂಪಿಯನ್ ಆಗಿದ್ದ ಸೈನಾ 2ನೇ ಸುತ್ತಿನಲ್ಲಿ ಜಪಾನಿನ 5ನೇ ಶ್ರೇಯಾಂಕಿತೆ ಅಕ್ನೆ ಯಮಗುಚಿ ಎದುರು ಸೆಣಸಲಿದ್ದಾರೆ.
ಚೀನಾ(ನ.16): ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ತಾರಾ ಶಟ್ಲರ್'ಗಳಾದ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಶುಭಾರಂಭ ಮಾಡಿದ್ದು, ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದೇ ವೇಳೆ ರಾಜ್ಯದ ಅಶ್ವಿನಿ ಪೊನ್ನಪ್ಪ ಮಿಶ್ರ ಡಬಲ್ಸ್ ಹಾಗೂ ಮಹಿಳಾ ಡಬಲ್ಸ್ ಎರಡರಲ್ಲೂ ಮೊದಲ ಸುತ್ತಿನಲ್ಲೇ ಹೊರಬಿದ್ದರು.
ಕಳೆದ ವಾರವಷ್ಟೇ ರಾಷ್ಟ್ರೀಯ ಚಾಂಪಿಯನ್'ಶಿಪ್ ಗೆದ್ದ ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ 21-12, 21-13 ಗೇಮ್'ಗಳಿಂದ ಅಮೆರಿಕದ ಬೀವೆನ್ ಜಾಂಗ್ ಎದುರು ಸುಲಭ ಜಯ ಸಾಧಿಸಿದರು. 2014ರಲ್ಲಿ ಚೀನಾ ಓಪನ್ ಚಾಂಪಿಯನ್ ಆಗಿದ್ದ ಸೈನಾ 2ನೇ ಸುತ್ತಿನಲ್ಲಿ ಜಪಾನಿನ 5ನೇ ಶ್ರೇಯಾಂಕಿತೆ ಅಕ್ನೆ ಯಮಗುಚಿ ಎದುರು ಸೆಣಸಲಿದ್ದಾರೆ.
ಸಿಂಧು ಪ್ರಯಾಸದ ಗೆಲುವು: ವಿಶ್ವ ನಂ.2 ಸಿಂಧು ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಿಸಿದರು. ಜಪಾನ್'ನ ಸಯಾಕ ಸಾಟೊ ವಿರುದ್ಧ 24-22, 23-21 ಗೇಮ್'ಗಳಿಂದ ಗೆಲುವು ಸಾಧಿಸಿದರು. ಎರಡನೇ ಸುತ್ತಿನಲ್ಲಿ ಸಿಂಧು ಚೀನಾದ ಹನ್ ಯಿಂಗ್ ಅವರನ್ನು ಎದುರಿಸಲಿದ್ದಾರೆ.
ಪುಟಿದೆದ್ದು ಗೆದ್ದ ಪ್ರಣಯ್: ರಾಷ್ಟ್ರೀಯ ಚಾಂಪಿಯನ್ ಎಚ್.ಎಸ್.ಪ್ರಣಯ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಹೊರಬೀಳುವ ಭೀತಿಗೆ ಸಿಲುಕಿದ್ದರು. ದ.ಕೊರಿಯಾದ ಡಾಂಗ್ ಕಿನ್ ಲೀ ವಿರುದ್ಧ ಪ್ರಣಯ್ 18-21, 21-16, 21-19 ಗೇಮ್'ಗಳಿಂದ ರೋಚಕ ಗೆಲುವು ಸಾಧಿಸಿದರು.
