ಕಂಚು ಗೆದ್ದು ಕಣ್ಣೀರಿಡುತ್ತಲೇ ದೇಶದ ಕ್ಷಮೆ ಕೋರಿದ ಪೂಜಾಗೆ ಸ್ಪೂರ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ
* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್
* ಮಹಿಳಾ ಕುಸ್ತಿಯಲ್ಲಿ ಚಿನ್ನದ ಪದಕ ಗೆಲ್ಲಲು ಕಣ್ಣೀರಿಟ್ಟ ಪೂಜಾಗೆ ಪ್ರಧಾನಿ ಸಾಂತ್ವನ
* ನಿಮ್ಮ ಪದಕವೇ ನಿಮ್ಮ ಸಾಧನೆಯನ್ನು ತೋರಿಸುತ್ತದೆ, ನೀವು ಎಲ್ಲರಿಗೂ ಸ್ಪೂರ್ತಿಯಾಗಿದ್ದೀರ ಎಂದ ಮೋದಿ
ಬರ್ಮಿಂಗ್‌ಹ್ಯಾಮ್(ಆ.07): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ಪ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಕಾದಾಟಲ್ಲಿ ಪೂಜಾ ಗೆಹ್ಲೋಟ್, ಸ್ಕಾಟ್ಲೆಂಡ್‌ನ ಕ್ರಿಸ್ಟಿಲ್ಲೇ ಲಮೊಫೆಕ್ ಲೆಚಿಡ್ಜೊ ಎದುರು 12-2 ಅಂತರದ ಗೆಲುವು ಸಾಧಿಸಿದರು. ಇನ್ನು ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ಕಣ್ಣೀರಿಡುತ್ತಲೇ ದೇಶದ ಕ್ಷಮೆ ಕೂರಿದ ಪೂಜಾಗೆ ಪ್ರಧಾನಿ ನರೇಂದ್ರ ಮೋದಿ ಸ್ಪೂರ್ತಿದಾಯಕ ಮಾತುಗಳನ್ನಾಡುವ ಮೂಲಕ ಸಮಾಧಾನ ಮಾಡಿದ್ದಾರೆ.
ಕಂಚಿನ ಪದಕ ಗೆದ್ದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಪೂಜಾ ಗೆಹ್ಲೋಟ್, ನಾನು ಸೆಮಿಫೈನಲ್‌ನಲ್ಲಿ ಸೋಲು ಕಂಡಿರುವುದಕ್ಕೆ ತುಂಬಾ ದುಃಖವಾಗುತ್ತಿದೆ. ಇದಕ್ಕಾಗಿ ನಾನು ದೇಶದ ಜನರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ. ಯಾಕೆಂದರೆ ನಾನು ಚಿನ್ನದ ಪದಕ ಗೆದ್ದು ರಾಷ್ಟ್ರಗೀತೆ ಮೊಳಗಿಸಬೇಕೆಂದುಕೊಂಡಿದ್ದೆ. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ. ನನಗೆ ಕಂಚಿನ ಪದಕ ಗೆಲ್ಲಲಷ್ಟೇ ಸಾಧ್ಯವಾಯಿತು. ನಾನು ಈ ಬಾರಿ ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದರತ್ತ ಗಮನ ಹರಿಸುತ್ತೇನೆ. ನನಗೆ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಪೂಜಾ ಕಣ್ಣೀರಿಟ್ಟರು.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಪೂಜಾ, ನಿಮ್ಮ ಪದಕವೇ ನಿಮ್ಮ ಸಂಭ್ರಮಾಚರಣೆಯಾಗಬೇಕು. ಅದು ಬಿಟ್ಟು ಕ್ಷಮೆ ಕೇಳುವುದಲ್ಲ. ನಿಮ್ಮ ಜೀವನ ಪ್ರಯಾಣ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾದದ್ದು. ನಿಮ್ಮ ಯಶಸ್ಸು ನಮ್ಮೆಲ್ಲರಿಗೂ ಸಂತೋಷ ಮೂಡಿಸಿದೆ. ನಿಮಗೆ ಉಜ್ವಲ ಭವಿಷ್ಯವಿದೆ. ಇದೇ ರೀತಿ ಮಿಂಚುತ್ತಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪೂಜಾ ಗೆಹ್ಲೋಟ್, 2019ರಲ್ಲಿ ನಡೆದ ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಜಯಿಸಿದ್ದರು. ಈ ಮೂಲಕ ಈ ಸ್ಪರ್ಧೆಯಲ್ಲಿ ಭಾರತ ಪರ ಪದಕ ಗೆದ್ದ ಎರಡನೇ ಮಹಿಳಾ ಕುಸ್ತಿಪಟು ಎನ್ನುವ ಕೀರ್ತಿಗೆ ಪೂಜಾ ಗೆಹ್ಲೋಟ್ ಪಾತ್ರರಾಗಿದ್ದರು. ಕಳೆದೆರಡು ವರ್ಷಗಳಿಂದ ಭುಜದ ಗಾಯದ ಸಮಸ್ಯೆ ಎದುರಿಸುತ್ತಿದ್ದ ಪೂಜಾ ಗೆಹ್ಲೋಟ್, ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕುಸ್ತಿ ಅಂಕಣಕ್ಕೆ ಕಣಕ್ಕಿಳಿದು ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
Commonwealth Games 2022: ರವಿ ಕುಮಾರ್ ದಹಿಯಾ, ವಿನೇಶ್ ಪೋಗಟ್, ನವೀನ್‌ಗೆ ಸ್ವರ್ಣ!
ಪೂಜಾ ಗೆಹ್ಲೋಟ್ 15 ಮಾರ್ಚ್ 1997ರಲ್ಲಿ ಡೆಲ್ಲಿಯಲ್ಲಿ ಜಯಿಸಿದ್ದರು. ಅವರ ಚಿಕ್ಕಪ್ಪ ಧರ್ಮವೀರ್ ಸಿಂಗ್ ಓರ್ವ ಕುಸ್ತಿಪಟುವಾಗಿದ್ದರು. ಆದರೆ ಪೂಜಾ ಅವರ ತಂದೆ ತಮ್ಮ ಮಗಳು ಕುಸ್ತಿ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪೂಜಾ ಗೆಹ್ಲೋಟ್ ವಾಲಿಬಾಲ್‌ನತ್ತ ಗಮನ ಹರಿಸಿದರು. ಪೂಜಾ ಗೆಹ್ಲೋಟ್ ಜ್ಯೂನಿಯರ್ ನ್ಯಾಷನಲ್ ಲೆವೆಲ್ ವಾಲಿಬಾಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ಆದರೆ 2010ರಲ್ಲಿ ಭಾರತದಲ್ಲೇ ನಡೆದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ದೇಶಕ್ಕೆ ಪದಕ ಗೆದ್ದ ಬೆನ್ನಲ್ಲೇ ಇದರಿಂದ ಸ್ಪೂರ್ತಿಗೊಂಡು ಪೂಜಾ ಗೆಹ್ಲೋಟ್ ಕುಸ್ತಿಯತ್ತ ಒಲವು ತೋರಿದರು. ಇದಾದ ಬಳಿಕ 2014ರಿಂದ ವೃತ್ತಿಪರ ಕುಸ್ತಿ ಅಭ್ಯಾಸ ಆರಂವಬಿಸಿದ ಅವರು 2016ರಲ್ಲಿ ನ್ಯಾಷನಲ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಪೂಜಾ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.