ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಮೋದಿ ಚಾಲನೆ; 10 ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟ
ಮೂರನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ
ಉತ್ತರ ಪ್ರದೇಶದ 4 ನಗರಗಳು ಕ್ರೀಡಾಕೂಟಕ್ಕೆ ಆತಿಥ್ಯ
ಕ್ರೀಡಾಕೂಟದಲ್ಲಿ 200ಕ್ಕೂ ಹೆಚ್ಚು ಯುನಿವರ್ಸಿಟಿಗಳ 4750ರಷ್ಟುಅಥ್ಲೀಟ್ಗಳು ಭಾಗಿ
ಲಖನೌ(ಮೇ.26): 3ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು. ಲಖನೌ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮವನ್ನು ಮೋದಿ ವರ್ಚುವಲ್ ಆಗಿ ಉದ್ಘಾಟಿಸಿ, ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಅಥ್ಲೀಟ್ಗಳಿಗೆ ಶುಭ ಹಾರೈಸಿದರು.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡಾ ವರ್ಚುವಲ್ ಆಗಿ ಪಾಲ್ಗೊಂಡರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರು ಸಮಾರಂಭದಲ್ಲಿ ಹಾಜರಿದ್ದರು. ಗಾಯಕ ಕೈಲಾಶ್ ಖೇರ್ ಸೇರಿದಂತೆ ಪ್ರಮುಖ ಕಲಾವಿದರು ಪ್ರದರ್ಶನ ನೀಡಿದರು. ಸಾಂಪ್ರದಾಯಿಕ ನೃತ್ಯಗಳು ಎಲ್ಲರ ಗಮನ ಸೆಳೆಯಿತು.
ಕ್ರೀಡಾಕೂಟದಲ್ಲಿ 200ಕ್ಕೂ ಹೆಚ್ಚು ಯುನಿವರ್ಸಿಟಿಗಳ 4750ರಷ್ಟುಅಥ್ಲೀಟ್ಗಳು ಪಾಲ್ಗೊಳ್ಳಲಿದ್ದು, 21 ಕ್ರೀಡೆಗಳು ನಡೆಯಲಿವೆ. ವಾರಾಣಸಿ, ಗೋರಖ್ಪುರ, ಲಖನೌ ಹಾಗೂ ಗೌತಮ ಬುದ್ಧ ನಗರಗಳು ಕೂಟಕ್ಕೆ ಆತಿಥ್ಯ ವಹಿಸಲಿವೆ. ಜೂ.3ರಂದು ವಾರಣಾಸಿಯಲ್ಲಿ ಕ್ರೀಡಾಕೂಟ ಸಮಾಪ್ತಿಗೊಳ್ಳಲಿದೆ.
ವಿಶ್ವ ಪ್ಯಾರಾ ಶೂಟಿಂಗ್: ಬೆಳ್ಳಿ ಜಯಿಸಿದ ಲೇಖರಾ
ಚಾಂಗ್ವೊನ್(ಕೊರಿಯಾ): ಪ್ಯಾರಾಲಿಂಪಿಕ್ ಚಾಂಪಿಯನ್, ಭಾರತದ ತಾರಾ ಅಥ್ಲೀಟ್ ಅವನಿ ಲೇಖರಾ ವಿಶ್ವ ಪ್ಯಾರಾ ಶೂಟಿಂಗ್ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕೊರಿಯಾದ ಚಾಂಗ್ವೊನ್ನಲ್ಲಿ ನಡೆಯುತ್ತಿರುವ ಕೂಟದಲ್ಲಿ 21 ವರ್ಷದ ಲೇಖರಾ 10 ಮೀ. ಏರ್ರೈಫಲ್ ಎಸ್ಎಚ್ 1 ವಿಭಾಗದಲ್ಲಿ 250.1 ಅಂಕಗಳನ್ನು ಸಂಪಾದಿಸಿ 2ನೇ ಸ್ಥಾನಿಯಾದರು. ಅವರು ಕೇವಲ 0.1 ಅಂಕದ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು. ಸ್ವೀಡನ್ನ ಅನ್ನಾ ಬೆನ್ಸನ್(250.2) ಬಂಗಾರ ಗೆದ್ದರು. ಅವನಿ ಗೆದ್ದ ಪದಕ ಈವರೆಗೆ ಅಂತಾರಾಷ್ಟ್ರೀಯ ಪ್ಯಾರಾ ಶೂಟಿಂಗ್ನಲ್ಲಿ ಭಾರತಕ್ಕೆ ಲಭಿಸಿದ 100ನೇ ಪದಕ.
ಅಕ್ಟೋಬರ್ 8ಕ್ಕೆ ಬೆಂಗ್ಳೂರು ಮ್ಯಾರಥಾನ್
ಬೆಂಗಳೂರು: 10ನೇ ಆವೃತ್ತಿಯ ಬೆಂಗಳೂರು ಮ್ಯಾರಥಾನ್ ಓಟದ ಸ್ಪರ್ಧೆ ಅಕ್ಟೋಬರ್ 8ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕರು ಪ್ರಕಟಿಸಿದ್ದಾರೆ. ವಿಪ್ರೋ ಸಂಸ್ಥೆಯು ಈ ಬಾರಿಯ ಮ್ಯಾರಥಾನ್ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದ್ದು, ಗುರುವಾರ ನಗರದ ಖಾಸಗಿ ಹೋಟೆಲ್ನಲ್ಲಿ ಲೋಗೋ ಬಿಡುಗಡೆ ಮಾಡಲಾಯಿತು.
ಕ್ರಿಕೆಟ್ ಜಗತ್ತಿಗೆ ಬ್ಯಾಟ್ ತಯಾರಿಸಿ ಕೊಡುವ ವಿಶ್ವಕರ್ಮ ಕಾಯಕಯೋಗಿಗಳು
ಮ್ಯಾರಥಾನ್ 42 ಕಿ.ಮೀ, 21 ಕಿ.ಮೀ ಹಾಗೂ 5 ಕಿ.ಮೀ.ನ 3 ವಿಭಾಗಗಳಲ್ಲಿ ನಡೆಯಲಿದ್ದು, ಒಟ್ಟು 20,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಮ್ಯಾರಥಾನ್ ಘೋಷಣೆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ವಿಪ್ರೋ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್, ರೇಸ್ ನಿರ್ದೇಶಕ ನಾಗರಾಜ್ ಅಡಿಗ, ಮ್ಯಾರಥಾನ್ ಪ್ರಚಾರ ರಾಯಭಾರಿ, ಅರ್ಜುನ ಪ್ರಶಸ್ತಿ ವಿಜೇತೆ ರೀತ್ ಅಬ್ರಹಾಂ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಮಲೇಷ್ಯಾ ಮಾಸ್ಟರ್ಸ್: ಶ್ರೀಕಾಂತ್, ಪ್ರಣಯ್, ಸಿಂಧು ಕ್ವಾರ್ಟರ್ಗೆ
ಕೌಲಾಲಂಪುರ: ಭಾರತೀಯ ತಾರಾ ಶಟ್ಲರ್‌ಗಳಾದ ಪಿ.ಸಿ.ಸಿಂಧು, ಕಿದಂಬಿ ಶ್ರೀಕಾಂತ್ ಹಾಗೂ ಎಚ್.ಎಸ್.ಪ್ರಣಯ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಲಕ್ಷ್ಯ ಸೇನ್ 2ನೇ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.
ಮಾಜಿ ಚಾಂಪಿಯನ್ ಸಿಂಧು ಮಹಿಳಾ ಸಿಂಗಲ್ಸ್ನ 2ನೇ ಸುತ್ತಿನಲ್ಲಿ ಗುರುವಾರ ಜಪಾನ್ನ ಆಯಾ ಒಹೊರಿ ವಿರುದ್ಧ 21-16, 21-11 ಅಂತರದಲ್ಲಿ ಜಯಿಸಿದರೆ, ಪುರುಷರ ಸಿಂಗಲ್ಸ್ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್ ಥಾಯ್ಲೆಂಡ್ನ ಕುನ್ಲಾವುಟ್ರನ್ನು 21-19, 21-19 ಅಂತರದಲ್ಲಿ ಮಣಿಸಿದರು. ಪ್ರಣಯ್ ಚೀನಾದ ಲಿ ಶೀ ಫೆಂಗ್ ವಿರುದ್ಧ 13-21, 21-16, 21-11 ಅಂತರದಲ್ಲಿ ಗೆದ್ದರು. ಸೇನ್ ಹಾಂಕಾಂಗ್‌ನ ಆಂಗಸ್ ಲಾಂಗ್ ವಿರುದ್ಧ 14-21, 19-21ರಲ್ಲಿ ಸೋತರು.