ಹಾಲಿ ಚಾಂಪಿಯನ್ ಪುಣೇರಿ ಪಲ್ಟಾನ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
- ನಾಸಿರ್ ಸಜಿಪ, ಕನ್ನಡಪ್ರಭ
ಹೈದರಾಬಾದ್: ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್, ಚೊಚ್ಚಲ ಟ್ರೋಫಿ ಕನಸಿನಲ್ಲಿರುವ ತಮಿಳ್ ತಲೈವಾಸ್ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಭಾರಂಭ ಮಾಡಿವೆ. ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದ ತೆಲುಗು ಟೈಟಾನ್ಸ್, ಕಳೆದ ಬಾರಿ ರನ್ನರ್-ಅಪ್ ಹರ್ಯಾಣ ಸ್ಟೀಲರ್ಸ್ ಸೋಲನುಭವಿಸಿದವು.
ಇಲ್ಲಿನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೈಟಾನ್ಸ್ ವಿರುದ್ಧ ತಲೈವಾಸ್ 44-29 ಅಂಕಗಳಿಂದ ಜಯಗಳಿಸಿತು. ಟೈಟಾನ್ಸ್ ಭರ್ಜರಿ ಆರಂಭ ಪಡೆದರೂ ಬಳಿಕ ತಲೈವಾಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಟೈಟಾನ್ಸ್ ನಾಯಕ ಪವನ್ ಶೆರಾವತ್ ಮೊದಲ ರೈಡ್‌ನಲ್ಲೇ 3 ಸೇರಿ 4 ರೈಡ್‌ಗಳಲ್ಲಿ 6 ಅಂಕ ಗಳಿಸಿದರು. ಆದರೆ ತಲೈವಾಸ್‌ಗೆ ಮೇಲುಗೈ ಸಾಧಿಸಲು ಹೆಚ್ಚಿನ ಸಮಯ ಬೇಕಾಗಲಿಲ್ಲ. 8ನೇ ನಿಮಿಷದಲ್ಲಿ ಟೈಟಾನ್ಸ್‌ನ ಆಲೌಟ್ ಮಾಡಿದ ತಲೈವಾಸ್ 11-7ರಲ್ಲಿ ಮುಂದಿತ್ತು. ಮೊದಲಾರ್ಧಕ್ಕೆ 20-17ರಲ್ಲಿ ಮೇಲುಗೈ ಸಾಧಿಸಿದ ತಂಡ 2ನೇ ಅವಧಿಯಲ್ಲೂ ಲೀಡ್ ಬಿಟ್ಟುಕೊಡದೆ ಭರ್ಜರಿ ಜಯಗಳಿಸಿತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್!
ಪುಣೇರಿಗೆ ಜಯ: ಪುಣೇರಿ ಹಾಗೂ ಹರ್ಯಾಣ ನಡುವಿನ 2ನೇ ಪಂದ್ಯ ಆರಂಭದಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾದರೂ, ಮೊದಲಾರ್ಧದ ಬಳಿಕ ಪುಣೇರಿ ಹಿಡಿತ ಸಾಧಿಸಿತು. ಮೊದಲ 20 ನಿಮಿಷಗಳ ಆಟ ಮುಕ್ತಾಯಕ್ಕೆ 19-13ರಿಂದ ಮುಂದಿದ್ದ ಪುಣೇರಿ, ಕೊನೆವರೆಗೂ ಪ್ರಾಬಲ್ಯ ಸಾಧಿಸಿ ತಾನೇಕೆ ಹಾಲಿ ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿತು. ತಂಡಕ್ಕೆ 35-25ರಿಂದ ಜಯಲಭಿಸಿತು.
ಇಂದು ಬುಲ್ಸ್ vs ಜೈಂಟ್ಸ್
ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಆಘಾತಕಾರಿ ಸೋಲುನುಭವಿಸಿದ್ದ ಬೆಂಗಳೂರು ಬುಲ್ಸ್ ತಂಡ ಭಾನುವಾರ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಾಡಲಿದ್ದು, ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ಕಾತರದಲ್ಲಿದೆ. ಗುಜರಾತ್ ಮೊದಲ ಪಂದ್ಯದಲ್ಲೇ ಜಯಭೇರಿ ಮೊಳಗಿಸಲು ಕಾಯುತ್ತಿದೆ.
ಪ್ರೊ ಕಬಡ್ಡಿ ಲೀಗ್: ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ಸೋಲಿನ ಆರಂಭ
ಇಂದಿನ ಪಂದ್ಯಗಳು
ಬೆಂಗಾಲ್-ಜೈಪುರ, ರಾತ್ರಿ 8 ಗಂಟೆಗೆ
ಬೆಂಗಳೂರು-ಗುಜರಾತ್, ರಾತ್ರಿ 9 ಗಂಟೆಗೆ
ಜೋಹರ್ ಕಪ್ ಹಾಕಿ: ಭಾರತ ತಂಡ ಶುಭಾರಂಭ
ಜೋಹರ್ (ಮಲೇಷ್ಯಾ): ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಭಾರತ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಶನಿವಾರ ನಡೆದ ಜಪಾನ್ ವಿರುದ್ಧದ ಪಂದ್ಯದಲ್ಲಿ ಭಾರತ 4-2 ಗೋಲುಗಳ ಗೆಲುವು ಸಾಧಿಸಿತು. ಭಾರತ ಪರ ಅಮಿರ್ ಅಲಿ (12ನೇನಿ.), ಗುರ್ಜೋತ್ ಸಿಂಗ್ (36ನೇ ನಿ.), ಆನಂದ್ ಸೌರಬ್ (44ನೇ ನಿ.) ಹಾಗೂ ಅಂಕಿತ್ ಪಾಲ್ (47ನೇ ನಿ.) ಗೋಲು ಬಾರಿಸಿದರು. ಭಾನುವಾರ 2ನೇ ಪಂದ್ಯದಲ್ಲಿ ಭಾರತಕ್ಕೆ ಬ್ರಿಟನ್ ಸವಾಲು ಎದುರಾಗಲಿದೆ.
ಡಿ.1ರಿಂದ ಭಾರತದಲ್ಲಿ ಏಷ್ಯನ್ ಮಹಿಳಾ ಹ್ಯಾಂಡ್‌ಬಾಲ್ ಕೂಟ
ನವದೆಹಲಿ: 20ನೇ ಆವೃತ್ತಿಯ ಏಷ್ಯನ್ ಮಹಿಳಾ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್ ಡಿ.1ರಿಂದ 10ರವರೆಗೂ ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೂಟವು ಕಜಕಸ್ತಾನದ ಅಲ್ಮಾಟಿಯಲ್ಲಿ ನಡೆಯಬೇಕಿತ್ತು. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಕೂಟವನ್ನು ನವದೆಹಲಿಗೆ ಸ್ಥಳಾಂತರಿಸಲಾಯಿತು.
ಭಾರತ, ಇರಾನ್, ದ.ಕೊರಿಯಾ, ಚೀನಾ, ಜಪಾನ್, ಕಜಕಸ್ತಾನ, ಹಾಂಕಾಂಗ್, ಸಿಂಗಾಪುರ, ಉಜೇಕಿಸ್ತಾನ ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯಲ್ಲಿ ಅಗ್ರ-4 ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ವರ್ಷ ಜರ್ಮನಿ ಹಾಗೂ ನೆದರ್‌ಲೆಂಡ್‌ಗಳಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿವೆ.
