ಕೊಚ್ಚಿ[ಡಿ.30]: ಪ್ರೊ ಕಬಡ್ಡಿ ಲೀಗ್ ರೋಚಕ ಘಟ್ಟ ತಲುಪಿದ್ದು, ಭಾನುವಾರದಿಂದ ಪ್ಲೇ ಆಫ್ ಹಂತ ಆರಂಭಗೊಳ್ಳಲಿದೆ. ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಯು ಮುಂಬಾ-ಯು.ಪಿ ಯೋಧಾ, 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್-ದಬಾಂಗ್ ಡೆಲ್ಲಿ ತಂಡಗಳು ಸೆಣಸಲಿವೆ. ಗೆಲ್ಲುವ ತಂಡಗಳು ಟೂರ್ನಿಯಲ್ಲಿ ಉಳಿದುಕೊಂಡರೆ, ಸೋಲುವ ತಂಡಗಳು ಹೊರಬೀಳಲಿವೆ.

ಮುಂಬಾ v/s ಯೋಧಾ
ಮೊದಲ ಪಂದ್ಯದಲ್ಲಿ ಮುಂಬಾ ಗೆಲ್ಲುವ ತಂಡ ಎನಿಸಿದರೂ, ಕಳೆದ 6 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಯು.ಪಿ.ಯೋಧಾದಿಂದ ಕಠಿಣ ಸವಾಲು ಎದುರಾಗಲಿದೆ. ಮುಂಬಾ ಕಳೆದೆರಡು ಪಂದ್ಯಗಳಲ್ಲಿ ಗೆಲುವನ್ನು ಕಂಡಿಲ್ಲ. ತಂಡದ ಬಲಾಬಲವನ್ನು ನೋಡಿದಾಗ, ಮುಂಬಾ ಮೇಲುಗೈ ಸಾಧಿಸುವ ಲಕ್ಷಣ ಕಂಡರೂ, ಲಯದ ಆಧಾರದ ಮೇಲೆ ಯೋಧಾ ವಿಜೇತ ತಂಡವಾಗಿ ಹೊರಹೊಮ್ಮಿದರೆ ಅಚ್ಚರಿಯಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಮುಂಬಾ ತನ್ನ ರಕ್ಷಣಾಪಡೆ ಹಾಗೂ ತಾರಾ ರೈಡರ್ ಸಿದ್ದಾರ್ಥ್ ದೇಸಾಯಿಯನ್ನು ನೆಚ್ಚಿಕೊಂಡಿದೆ. ಯೋಧಾ ತನ್ನ ಕಾರ್ನರ್ ಡಿಫೆಂಡರ್’ಗಳಾದ ನಿತೇಶ್, ಸಚಿನ್ ಹಾಗೂ ರೈಡರ್ ಪ್ರಶಾಂತ್ ರೈ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ.
ಪಂದ್ಯ ಆರಂಭ: ರಾತ್ರಿ-8ಕ್ಕೆ

ಬೆಂಗಾಲ್‌ v/s ಡೆಲ್ಲಿ
2ನೇ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡುವುದು ಕಷ್ಟ. ಎರಡು ತಂಡಗಳು ಸಮತೋಲನದಿಂದ ಕೂಡಿವೆ. ಆದರೆ ಈ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಆಡಿದ 2 ಪಂದ್ಯಗಳಲ್ಲೂ ಬೆಂಗಾಲ್ ವಾರಿಯರ್ಸ್ ಸೋಲುಂಡಿದೆ. ತಾರಾ ರೈಡರ್ ಮಣೀಂದರ್ ಸಿಂಗ್ ವೈಫಲ್ಯವೇ ಈ ಎರಡು ಸೋಲಿಗೆ ಕಾರಣ. ಇನ್ನು ಸುರ್ಜಿತ್ ಸಿಂಗ್ ತಮ್ಮ ಎಂದಿನ ಲಯದಲ್ಲಿಲ್ಲ. ಡಿಫೆನ್ಸ್’ನಲ್ಲಿ ಬೆಂಗಾಲ್’ಗೆ ಹೋಲಿಸಿದರೆ ಡೆಲ್ಲಿ ಬಲಿಷ್ಠವಾಗಿದೆ. ಮಿರಾಜ್ ಶೇಖ್ ತಮ್ಮ ಪ್ರಚಂಡ ಲಯ ಮುಂದುವರೆಸಿದರೆ ಡೆಲ್ಲಿಯನ್ನು ಸೋಲಿಸುವುದು ಕಷ್ಟ.
ಪಂದ್ಯ ಆರಂಭ: ರಾತ್ರಿ 9ಕ್ಕೆ