482 ಕೋಟಿ ರೂಪಾಯಿ ನಷ್ಟ ಭರಿಸಲು ಬಿಸಿಸಿಐ ವಿರುದ್ಧ ಪಾಕ್ ದೂರು

First Published 6, Jul 2018, 5:45 PM IST
PCB charges BCCI for compensation for financial losses
Highlights

ಒಪ್ಪಂದದ ಪ್ರಕಾರ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಯೋಜನೆ ಗೊಳ್ಳದೇ ಪಾಕಿಸ್ತಾನ ತಂಡಕ್ಕೆ 482 ಕೋಟಿ ನಷ್ಟವಾಗಿದೆ ಅನ್ನೋದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಾದ. ಅಷ್ಟಕ್ಕೂ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಒಪ್ಪಂದ ಏನು? ಪಿಸಿಬಿ ಕಾನೂನು ಹೋರಾಟಕ್ಕೆ ಮುಂದಾಗಿರೋದೇಕೆ? ಇಲ್ಲಿದೆ ಡೀಟೇಲ್ಸ್.

ಲಾಹೋರ್(ಜು.06): ಭಾರತ -ಹಾಕಿಸ್ತಾನ ದ್ವಿಪಕ್ಷೀಯ ಸರಣಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿ ಹೈರಾಣಿಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಇದೀಗ ಐಸಿಸಿಗೆ ದೂರು ನೀಡಿದೆ. ಸರಣಿ ರದ್ದಾಗೋ ಮೂಲಕ ಪಾಕ್ ಕ್ರಿಕೆಟ್ ಮಂಡಳಿಗೆ ಆಗಿರೋ 482 ಕೋಟಿ ರೂಪಾಯಿ ನಷ್ಟವನ್ನ ಬಿಸಿಸಿಐ ಭರಿಸ ಬೇಕು ಎಂದು ಪಿಸಿಬಿ ಆಗ್ರಹಿಸಿದೆ.

2105 ರಿಂದ 2023ರೊಳಗೆ  ಭಾರತ ಹಾಗೂ ಪಾಕಿಸ್ತಾನ 6 ದ್ವಿಪಕ್ಷೀಯ ಸರಣಿ ಆಡಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಉತ್ತಮವಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕ್ರಿಕೆಟ್ ಸರಣಿಗೆ ಅನುಮತಿ ನೀಡಿಲ್ಲ. ಇದೀಗ ಒಪ್ಪಂದದ ಪ್ರಕಾರ ಬಿಸಿಸಿಐ ನಡೆದುಕೊಂಡಿಲ್ಲ ಎಂದು ಪಿಸಿಬಿ, ದೂರು ದಾಖಲಿಸಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಬಿಕ್ಕಟ್ಟು ಪರಿಹರಿಸಲು ಐಸಿಸಿ ಮೂವರು ತಜ್ಞರ ಸಮಿತಿಯನ್ನ ನೇಮಕ ಮಾಡಿದೆ. ಈ ಸಮಿತಿ ಉಭಯ ದೇಶಗಳ ವಾದವನ್ನ ಆಲಿಸಿ, ಅಕ್ಟೋಬರ್ 3 ರಂದು ದುಬೈನಲ್ಲಿ ಸಭೆ ಸೇರಲಿದೆ.

ಬಿಸಿಸಿಐ ವಿರುದ್ಧ ತನಗೆ ಹಿನ್ನಡೆಯಾಗಬಹುದೆಂಬ ಕಾರಣದಿಂದ ಇದೀಗ ಪಿಸಿಬಿ ಮುಖ್ಯಸ್ಥ ನಜೀಮ್ ಸೇಥಿ ಹಾಗೂ ಪಿಸಿಬಿ ಪದಾಧಿಕಾರಿಗಳು ಮುಂದಿನ ವಾರ ನ್ಯಾಯವಾದಿಗಳ ಜೊತೆ ಚರ್ಚೆ ನಡೆಸಲು ಲಂಡನ್‌ಗೆ ತೆರಳಲಿದ್ದಾರೆ.

ಏನಿದು ಒಪ್ಪಂದ: 2014ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್ ಶ್ರೀನಿವಾಸನ್ ಐಸಿಸಿ ಮುಂದೆ ಹೊಸ ಪ್ರಸ್ತಾಪ ಮುಂದಿಟ್ಟಿದ್ದರು. ಬಿಗ್ ತ್ರಿ ಮಾಡೆಲ್ ಪ್ರಸ್ತಾದಲ್ಲಿ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ಆದಾಯ ಹರಿದುಬರುವ ಯೋಜನೆ ರೂಪಿಸಿದ್ದರು. ಈ ಪ್ರಸ್ತಾಪವನ್ನ ಬೆಂಬಲಿಸಲು ಎನ್ ಶ್ರೀನಿವಾಸನ್ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜೊತೆ 6 ದ್ವಿಪಕ್ಷೀಯ ಸರಣಿ ಆಡಲು ಒಪ್ಪಂದ ಮಾಡಿಕೊಂಡಿದ್ದರು. 

ಸದ್ಯ ಬಿಗ್ ತ್ರಿ ಮಾಡೆಲ್‌ಗೆ ಐಸಿಸಿ ಅಡ್ಡಗಾಲು ಹಾಕಿದೆ. ಇತ್ತ ಎನ್ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಬಂಧ ಕೂಡ ಹಳಸಿದೆ. ಹೀಗಾಗಿ ದ್ವಿಪಕ್ಷೀಯ ಸರಣಿ ಕಷ್ಟ. ಆದರೆ ಒಪ್ಪಂದವನ್ನ ಮುಂದಿಟ್ಟುಕೊಂಡು ಪಿಸಿಬಿ ಕಾನೂನು ಮೊರೆ ಹೋಗಲು ನಿರ್ಧರಿಸಿದೆ.

loader