ಬೆಂಗಳೂರು[ಜ.14]: ನಾಲ್ಕನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್’ನ ಚಾಂಪಿಯನ್ ಆಗಿ ಬೆಂಗಳೂರು ರ‍್ಯಾಪ್ಟರ್ಸ್ ತಂಡ ಹೊರಹೊಮ್ಮಿದೆ. 

ಭಾನುವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ನೇತೃತ್ವದ ಬೆಂಗಳೂರು ತಂಡ 4-3 ಅಂತರದಲ್ಲಿ ಮುಂಬೈ ರಾಕೆಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಚೊಚ್ಚಲ ಬಾರಿಗೆ ಪಿಬಿಎಲ್ ಪ್ರಶಸ್ತಿ ಎತ್ತಿ ಹಿಡಿಯಿತು.

ಮಿಶ್ರ ಡಬಲ್ಸ್ ಟ್ರಂಪ್ ಮ್ಯಾಚ್’ನಲ್ಲಿ ಗೆದ್ದ ಮುಂಬೈ ಆರಂಭದಲ್ಲೇ 2-0ಯಿಂದ ಮುನ್ನಡೆಯಿತು. ಪುರುಷರ ಸಿಂಗಲ್ಸ್’ನಲ್ಲಿ ಗೆದ್ದ ಶ್ರೀಕಾಂತ್ ಅಂತರವನ್ನು 1-2ಕ್ಕಿಳಿಸಿದರು. ಮಹಿಳಾ ಸಿಂಗಲ್ಸ್’ನ ಟ್ರಂಪ್ ಮ್ಯಾಚ್’ನಲ್ಲಿ ಬೆಂಗಳೂರಿನ ಥ್ರೀ ತ್ರಾಂಗ್ ಸುಲಭ ಗೆಲುವು ಪಡೆದು ತಂಡ 3-2 ಮುನ್ನಡೆ ಪಡೆಯಲು ನೆರವಾದರು. ಇನ್ನು ಪುರುಷರ ಸಿಂಗಲ್ಸ್’ನ 2ನೇ ಪಂದ್ಯ ಗೆದ್ದ ಸಮೀರ್ ವರ್ಮಾ, ಮುಂಬೈ 3-3 ರಲ್ಲಿ ಸಮಬಲ ಸಾಧಿಸಲು ನೆರವಾದರು. ಪುರುಷರ ಡಬಲ್ಸ್ ಪಂದ್ಯದಲ್ಲಿ ಗೆದ್ದ ಬೆಂಗಳೂರು ಟ್ರೋಫಿ ತಮ್ಮದಾಗಿಸಿಕೊಂಡಿತು.