ಬಿ ಗುಂಪಿನಲ್ಲಿರುವ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ತಲಾ ಎರಡೆರಡು ಪಂದ್ಯಗಳನ್ನಾಡಿ ತಲಾ 2 ಅಂಕಗಳನ್ನು ಹೊಂದಿವೆ. ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ ಪರಿಣಾಮ ಪಾಕಿಸ್ತಾನದ ನೆಟ್ ರನ್'ರೇಟ್ ಇನ್ನೂ ಪಾತಾಳದಲ್ಲಿಯೇ ಇದೆ.

ಬರ್ಮಿಂಗ್'ಹ್ಯಾಂ: ಚಾಂಪಿಯನ್ಸ್‌ ಟ್ರೋಫಿಯ ‘ಬಿ' ಗುಂಪಿನಲ್ಲಿ ನಿನ್ನೆ ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದೆ. ಮಳೆಯಿಂದ ಅಡಚಣೆಯಾಗಿ ಡಕ್ವರ್ತ್ ಲೂಯಿಸ್ ಲೆಕ್ಕಾಚಾರದಲ್ಲಿ ಪಾಕಿಸ್ತಾನ 19 ರನ್'ಗಳಿಂದ ಜಯ ಪಡೆದಿದೆ. ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲುನುಭವಿಸಿದ್ದ ಪಾಕಿಸ್ತಾನ ಈ ಗೆಲುವಿನ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಎಜ್‌'ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಪಾಕ್ ಬೌಲರ್'ಗಳ ಶಿಸ್ತುಬದ್ಧ ದಾಳಿಗೆ ಸಿಲುಕಿದ ಹರಿಣಗಳ ಪಡೆ 50 ಓವರ್'ನಲ್ಲಿ ಕೇವಲ 219 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 27 ಓವರ್'ನಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದ್ದಾಗ ಮಳೆ ಅಡ್ಡಿಯಾಯಿತು. ಪಂದ್ಯ ಮುಂದೆ ಸಾಗಲಿಲ್ಲ. ಡಕ್ವರ್ಥ್ ಲೂಯಿಸ್ ನಿಯಮವನ್ನು ಅನ್ವಯಿಸಿದಾಗ, ಪಾಕಿಸ್ತಾನವು ಈ ಹಂತದಲ್ಲಿ, ಅಂದರೆ 27 ಓವರ್'ನಲ್ಲಿ 101 ರನ್ ಗಳಿಸಬೇಕಿತ್ತು. ಆದರೆ, ಪಾಕಿಸ್ತಾನ 119 ರನ್ ಗಳಿಸಿದ್ದರಿಂದ ವಿಜಯಮಾಲೆ ಧರಿಸಿತು. ಶೋಯಬ್ ಮಲಿಕ್ ಕ್ಷಿಪ್ರ ಗತಿಯಲ್ಲಿ ಒಂದಷ್ಟು ರನ್ ಗಳಿಸಿದ್ದು ಪಾಕಿಸ್ತಾನದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಪಾಕ್ ಟೈಟ್ ಬೌಲಿಂಗ್:
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಹಶೀಂ ಆಮ್ಲಾ (13) ರನ್‌ಗಳಿಸಿ ಮೊದಲ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿದರು. 20 ರನ್‌ಗಳ ಅಂತರದಲ್ಲಿ ಕ್ವಿಂಟಾನ್‌ ಡಿ ಕಾಕ್‌ (33) ರನ್‌ಗಳಿಸಿದ್ದಾಗ ಹಫೀಜ್‌ ಬೌಲಿಂಗ್‌ನಲ್ಲಿ ಎಲ್‌'ಬಿ ಬಲೆಗೆ ಬಿದ್ದರು. ನಂತರದ 4 ಎಸೆತಗಳಲ್ಲಿ ನಾಯಕ ಡಿವಿಲಿಯರ್ಸ್‌ ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಆಫ್ರಿಕಾ ತಂಡಕ್ಕೆ ಪಾಕ್‌ ಬೌಲರ್‌ಗಳು ಆಘಾತ ನೀಡಿದರು. ಬಳಿಕ ಡೇವಿಡ್‌ ಮಿಲ್ಲರ್‌ ಮತ್ತು ಫಾಫ್‌ ಡು ಪ್ಲೇಸಿ ತಂಡಕ್ಕೆ ಚೇತರಿಕೆ ನೀಡುವ ಭರವಸೆ ಮೂಡಿಸಿದರು. ಆದರೆ ಡು ಪ್ಲೇಸಿ (26) ರನ್‌ಗಳಿಸಿದ್ದ ವೇಳೆಯಲ್ಲಿ ಹಸನ್‌ ಅಲಿ ಬೌಲಿಂಗ್‌'ನಲ್ಲಿ ಕ್ಲೀನ್‌ ಬೌಲ್ಡ್‌ ಆದರು. ನಂತರ ಬಂದ ಜೆ.ಪಿ. ಡುಮಿನಿ (8), ವೇಯ್ನ್ ಪಾರ್ನೆಲ್‌ (0) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ ಮಿಲ್ಲರ್‌, ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ಮೂಲಕ ತಂಡದ ಮೊತ್ತ ಹೆಚ್ಚಿಸಿದರೆ, ಕೊನೆಯಲ್ಲಿ ವೇಗದ ಬ್ಯಾಟಿಂಗ್‌ ನಡೆಸಿದರು. ಕೊನೆಯಲ್ಲಿ ಕ್ರಿಸ್‌ ಮೋರಿಸ್‌ (28) ಮತ್ತು ಕಗಿಸೊ ರಬಾಡ (26) ಮಿಲ್ಲರ್‌ಗೆ ಉತ್ತಮ ಸಾಥ್‌ ನೀಡಿದರು. ಮೋರಿಸ್‌ ಜತೆ 7ನೇ ವಿಕೆಟ್‌ಗೆ 47 ಹಾಗೂ ರಬಾಡ ಜತೆಯಲ್ಲಿ 8ನೇ ವಿಕೆಟ್‌ಗೆ 48 ರನ್‌ಗಳಿಸಿದ್ದು, ತಂಡವನ್ನು 200 ರ ಗಡಿ ದಾಟಿಸುವಲ್ಲಿ ನೆರವಾಯಿತು. ಈ ಎರಡೂ ಜತೆಯಾಟಗಳು ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನಲ್ಲಿ ದೊಡ್ಡ ಜತೆಯಾಟ ಎನಿಸಿತು. ಮಿಲ್ಲರ್‌ 104 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್‌ ಸಹಿತ 75 ರನ್‌ಗಳಿಸಿ ಅಜೇಯರಾಗುಳಿದರು. ಪಾಕಿಸ್ತಾನ ಪರ ಹಸನ್‌ ಅಲಿ 3, ಜುನೈದ್‌ ಖಾನ್‌, ಇಮಾದ್‌ ವಾಸೀಂ ತಲಾ 2 ಮತ್ತು ಮೊಹಮ್ಮದ್‌ ಹಫೀಜ್‌ 1 ವಿಕೆಟ್‌ ಪಡೆದರು.

ಮುಂದಿನ ಪಂದ್ಯಗಳು:
ಬಿ ಗುಂಪಿನಲ್ಲಿರುವ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ತಲಾ ಎರಡೆರಡು ಪಂದ್ಯಗಳನ್ನಾಡಿ ತಲಾ 2 ಅಂಕಗಳನ್ನು ಹೊಂದಿವೆ. ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ ಪರಿಣಾಮ ಪಾಕಿಸ್ತಾನದ ನೆಟ್ ರನ್'ರೇಟ್ ಇನ್ನೂ ಪಾತಾಳದಲ್ಲಿಯೇ ಇದೆ.

ಜೂನ್ 11ರಂದು ದಕ್ಷಿಣ ಆಫ್ರಿಕಾ ತಂಡವು ಭಾರತದ ಸವಾಲನ್ನು ಎದುರಿಸಲಿದೆ. ಜೂನ್ 12ರಂದು ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೆಣಸಲಿದೆ. ಇಂದು, ಅಂದರೆ ಜೂನ್ 8ರಂದು ಭಾರತ ವರ್ಸಸ್ ಶ್ರೀಲಂಕಾ ಪಂದ್ಯ ನಡೆಯಲಿದ್ದು, ಭಾರತವೇನಾದರೂ ಗೆದ್ದಲ್ಲಿ ಸೀದಾ ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌:

ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 219/8
(ಡೇವಿಡ್‌ ಮಿಲ್ಲರ್‌ ಅಜೇಯ 75, ಡಿ ಕಾಕ್‌ 33, ಹಸನ್‌ ಅಲಿ 24ಕ್ಕೆ 3)

ಪಾಕಿಸ್ತಾನ 27 ಓವರ್‌ಗಳಲ್ಲಿ 119/3
(ಬಾಬರ್‌ ಅಜಾಂ 31, ಹಫೀಜ್‌ 26, ಮಾರ್ಕೆಲ್‌ 18ಕ್ಕೆ 3)

epaper.kannadaprabha.in