Asianet Suvarna News Asianet Suvarna News

ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್

ತಾಂತ್ರಿಕವಾಗಿ ನಿಪುಣನಾಗಿರುವ ಬಾಬರ್ ಅಜಂ ಬಹಳ ಸ್ಥಿತ ಪ್ರಜ್ಞ. ಈತನ ಈ ಗುಣವೇ ಈತನ ರನ್ ಬೇಟೆಗೆ ಸಹಾಯವಾಗಿದೆ.

pak coach compares babar azam to virat kohli

ನವದೆಹಲಿ(ಡಿ. 01): ಪಾಕಿಸ್ತಾನದಲ್ಲೊಬ್ಬ ಹೊಸ ಬ್ಯಾಟಿಂಗ್ ಮಾಂತ್ರಿಕ ಹುಟ್ಟಿಕೊಂಡಿದ್ದಾನೆ. 22 ವರ್ಷದ ಬಾಬರ್ ಅಜಮ್ ಅವರನ್ನು ವಿಶ್ವ ಕ್ರಿಕೆಟ್ ಲೋಕದ ರೈಸಿಂಗ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಪಾಕಿಸ್ತಾನದ ಮುಖ್ಯ ಕೋಚ್ ಮಿಕಿ ಆರ್ಥರ್ ಅವರಂತೂ ಬಾಬರ್ ಅಜಂ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿದ್ದಾರೆ.

"ಮುಂದಿನ ದಿನಗಳಲ್ಲಿ ಈತ ಅಸಾಮಾನ್ಯ ಕ್ರಿಕೆಟಿಗನಾಗುತ್ತಾನೆ. ಈತನ ವಯಸ್ಸಿನಲ್ಲಿ ಕೊಹ್ಲಿ ಆಡುತ್ತಿದ್ದ ರೀತಿಯನ್ನು ನೆನಪಿಸುವಂತಿದೆ ಬಾಬರ್ ಆಟ," ಎಂದು ಮಿಕಿ ಆರ್ಥರ್ ಹೇಳಿದ್ದಾರೆಂದು ಪಾಕ್'ನ ಎಕ್ಸ್'ಪ್ರೆಸ್ ಟ್ರಿಬೂನ್ ಪತ್ರಿಕೆ ವರದಿ ಮಾಡಿದೆ.

ಪಾಕ್'ನ ಜೂನಿಯರ್ ಕ್ರಿಕೆಟ್'ನಿಂದ ಬೆಳೆದು ಬಂದಿರುವ ಬಾಬರ್ ಅಜಂ ಗಳಿಸಿರುವ ಹಾಗೂ ಗಳಿಸುತ್ತಿರುವ ರನ್'ಗಳೇ ಈತನ ಪ್ರತಿಭೆಗೆ ಕೈಗನ್ನಡಿಯಾಗಿವೆ. ವರ್ಷದ ಹಿಂದೆ ಏಕದಿನ ಕ್ರಿಕೆಟ್'ಗೆ ಕಾಲಿಟ್ಟ ಬಾಬರ್ ಅಜಂ 18 ಪಂದ್ಯಗಳಿಂದ ಈಗಾಗಲೇ 3 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾನೆ. ಈತ ಬರೋಬ್ಬರಿ 52.11 ಸರಾಸರಿಯಲ್ಲಿ 886 ರನ್ ಗಳಿಸಿದ್ದಾನೆ. ಎರಡು ತಿಂಗಳ ಹಿಂದೆ ಟೆಸ್ಟ್ ಕ್ರಿಕೆಟ್'ಗೆ ಅಡಿಯಿಟ್ಟ ಈತ 3 ಪಂದ್ಯಗಳಿಂದ 51.44 ಸರಾಸರಿಯಲ್ಲಿ 232 ರನ್ ಪೇರಿಸಿದ್ದಾನೆ. ಮೊನ್ನೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಈತ ಅಜೇಯ 90 ರನ್ ಗಳಿಸಿ ಗಮನ ಸೆಳೆದಿದ್ದಾನೆ.

ತಾಂತ್ರಿಕವಾಗಿ ನಿಪುಣನಾಗಿರುವ ಬಾಬರ್ ಅಜಂ ಬಹಳ ಸ್ಥಿತ ಪ್ರಜ್ಞ. ಈತನ ಈ ಗುಣವೇ ಈತನ ರನ್ ಬೇಟೆಗೆ ಸಹಾಯವಾಗಿದೆ. ಕಮ್ರಾನ್ ಅಕ್ಮಲ್ ಮತ್ತು ಉಮರ್ ಅಕ್ಮಲ್ ಅವರ ಸಂಬಂಧಿಯಾಗಿರುವ ಬಾಬರ್ ಅಜಂ ಪಾಕಿಸ್ತಾನದ ಭವಿಷ್ಯದ ಬ್ಯಾಟಿಂಗ್ ತಾರೆ ಎಂಬುದು ಬಹುತೇಕ ನಿಶ್ಚಿತವಾಗಿದೆ.

Follow Us:
Download App:
  • android
  • ios