ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಒಎನ್‌ಜಿಸಿ ಸಂಸ್ಥೆ ಎಚ್ಚರಿಕೆ ನೀಡಿದೆ. ಅಷ್ಟಕ್ಕೂ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಎಚ್ಚರಿಕೆ ನೀಡಿದ್ದೇಕೆ? ಇಲ್ಲಿದೆ.

ನವದೆಹಲಿ(ಸೆ.23): ಗರಿಷ್ಠ ಬ್ರಾಂಡ್ ಪ್ರಮೋಶನ್‍‌ಗಳಲ್ಲಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಪ್ರತಿ ಜಾಹೀರಾತು ಹಾಗೂ ಎಂಡೋರ್ಸ್‌ಮೆಂಟ್‌ಗೆ ಕೊಹ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ)ಯಲ್ಲಿ ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದಾರೆ. ಕೊಹ್ಲಿ ಸೇರಿದಂತೆ ಹಲವು ಕ್ರೀಡಾಪಟುಗಳ ಸಾಧನೆ ಪರಿಗಣಿಸಿ ಒಎನ್‌ಜಿಸಿ ಉದ್ಯೋಗ ನೀಡಿದೆ. ಈ ಮೂಲಕ ತಮ್ಮ ಬ್ರ್ಯಾಂಡ್ ಪ್ರಮೋಶನ್‌ಗೆ ಒಎನ್‌ಜಿಸಿ ಒಪ್ಪಂದ ಮಾಡಿಕೊಂಡಿದೆ.

ಒಎನ್‌ಜಿಸಿ ಒಪ್ಪಂದ ಮಾಡಿಕೊಂಡಿದ್ದೇ ಬಂತು. ವಿರಾಟ್ ಕೊಹ್ಲಿ ಸೇರಿದಂತೆ ಯಾವುದೇ ಕ್ರಿಕೆಟರ್ ಅಥವಾ ಕ್ರೀಡಾಪಟುಗಳು ಒಎನ್‌ಜಿಸಿ ಬ್ರ್ಯಾಂಡ್ ಪ್ರಮೋಶನ್ ಮಾಡಿಲ್ಲ. ಹೀಗಾಗಿ ಕೊಹ್ಲಿ ಹಾಗೂ ಇತರ ಕ್ರೀಡಾಪಟುಗಳಿಗೆ ಒಎನ್‌ಜಿಸಿ ಎಚ್ಚರಿಕೆ ನೀಡಿದೆ. ಒಎನ್‌ಜಿಸಿಯಲ್ಲಿ ಒಪ್ಪಂದವಿರೋ ಎಲ್ಲಾ ಕ್ರೀಡಾಪಟುಗಳು ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಿಬೇಕು ಎಂದು ಸೂಚಿಸಿದೆ.

ಕ್ರಿಕೆಟಿಗರು, ಕ್ರೀಡಾಪಟುಗಳು ತಮ್ಮ ಜರ್ಸಿಗಳಲ್ಲಿ ಒಎನ್‌ಜಿಸಿ ಲೋಗೋ ಬಳಸಬೇಕು. ಇನ್ನು ಮಾಧ್ಯಮ ಜೊತೆಗಿನ ಸಂವಾದ ಪ್ರತಿಕ್ರಿಯೆಯಲ್ಲಿ ಒಎನ್‌ಜಿಸಿ ಕುರಿತು ಮಾತನಾಡಬೇಕು ಎಂದು ಒಎನ್‌ಜಿಸಿ ಇತ್ತೀಚಿನ ನಡೆಸಿದ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. 

ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಗೌತಮ್ ಗಂಭೀರ್, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಇತರ ಕ್ರೀಡಾಪಟುಗಳಾದ ಹಿಮಾ ದಾಸ್, ಎಂ.ಆರ್ ಪೂವಮ್ಮ, ಪಂಕಜ್ ಅಡ್ವಾಣಿ, ಹೀನಾ ಸಿಧು ಹಾಗೂ ಅಶ್ವಿನಿ ಪೊನ್ನಪ್ಪ ಒಎನ್‌ಜಿಸಿ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ.

ಈ ದಿಗ್ಗಜ ಕ್ರೀಡಾಪಟುಗಳು ಸಾಧನೆ ಮಾಡಿ ವಿಶ್ವದ ಗಮನಸೆಳೆದಿದ್ದಾರೆ. ಆದರೆ ಸದ್ಯ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡವರಿಂದ ಕಂಪೆನಿ ಬ್ರ್ಯಾಂಡ್ ಪ್ರಮೋಟ್ ಆಗಿಲ್ಲ. ಹೀಗಾಗಿ ಎಲ್ಲಾ ಕ್ರೀಡಾಪಟುಗಳಿಗೆ ಸೂಚನೆ ನೀಡಲಾಗಿದೆ ಎಂದು ಒಎನ್‌ಜಿಸಿ ಹೇಳಿದೆ.