ಬೆಂಗಳೂರು[ಜು.22]: ವಿಶ್ವಕ್ರಿಕೆಟ್ ಕಂಡ ಮಾಂತ್ರಿಕ ಸ್ಪಿನ್ನರ್ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ ಇಂದಿಗೆ ಸರಿಯಾಗಿ 9 ವರ್ಷಗಳ ಹಿಂದೆ 800 ಕಬಳಿಸುವುದರ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ಭಾರತ ವಿರುದ್ಧ ಮುರುಳಿ ಕಟ್ಟಕಡೆಯ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ್ದರು. 

'ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರವಾದ ಮುರುಳಿ

2010ರಲ್ಲಿ ಭಾರತದ ವಿರುದ್ಧದ ಗಾಲೆ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಮುರುಳಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಆ ವೇಳೆಗೆ ಮುತ್ತಯ್ಯ 792 ವಿಕೆಟ್ ಪಡೆದಿದ್ದರು. ಹೀಗಾಗಿ ತಮ್ಮ ವೃತ್ತಿಜೀವನದ ಕಟ್ಟಕಡೆಯ ಟೆಸ್ಟ್ ಪಂದ್ಯದಲ್ಲಿ 800 ವಿಕೆಟ್ ಪೂರೈಸಲು 8 ವಿಕೆಟ್’ಗಳ ಅವಶ್ಯಕತೆಯಿತ್ತು. ತಮ್ಮ 793 ವಿಕೆಟ್ ರೂಪದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬಲಿ ಪಡೆದರು. ಆ ಬಳಿಕ ಮೊದಲ ಮೊದಲ ಇನಿಂಗ್ಸ್’ನಲ್ಲಿ 5 ವಿಕೆಟ್ ಪಡೆಯುವ ಮೂಲಕ ವಿಕೆಟ್’ಗಳ ಸಂಖ್ಯೆಯನ್ನು 797ಕ್ಕೇರಿಸಿಕೊಂಡರು. ಆ ಬಳಿಕ ಲಸಿತ್ ಮಾಲಿಂಗ ಮಾರಕ ದಾಳಿಯ ಹೊರತಾಗಿಯೂ ಕೊನೆಯದಾಗಿ ಭಾರತದ ಲೆಗ್ ಸ್ಪಿನ್ನರ್ ಪ್ರಜ್ಯಾನ್ ಓಜಾ ವಿಕೆಟ್ ಪಡೆಯುವುದರೊಂದಿಗೆ 800 ವಿಕೆಟ್ ಪೂರೈಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ 800 ಬಲಿ ಪಡೆದ ಮೊದಲ ಸ್ಪಿನ್ನರ್ ಎನ್ನುದ ವಿಶ್ವದಾಖಲೆ ಬರೆದಿದ್ದಾರೆ.

ಹೀಗಿತ್ತು ನೋಡಿ ಆ ಕೊನೆಯ ಎಸೆತ:

ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರುಳೀಧರನ್ 800 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 708 ವಿಕೆಟ್’ಗಳೊಂದಿಗೆ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಎರಡನೇ ಸ್ಥಾನದಲ್ಲಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 619 ವಿಕೆಟ್’ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್’ಸನ್ 575 ವಿಕೆಟ್ ಕಬಳಿಸಿದ್ದು, ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ. ಹೀಗಾಗಿ ಮುತ್ತಯ್ಯ ಮುರುಳೀಧರನ್ ದಾಖಲೆ ಇನ್ನೂ ಕೆಲ ದಶಕಗಳ ಕಾಲ ಅಚ್ಚಳಿಯದೇ ಉಳಿದರೂ ಅಚ್ಚರಿಯಿಲ್ಲ.   

ಮುತ್ತಯ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರವಲ್ಲದೇ ಏಕದಿನ ಕ್ರಿಕೆಟ್’ನಲ್ಲೂ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 534 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇನ್ನು ಟಿ20 ಕ್ರಿಕೆಟ್’ನಲ್ಲಿ 13 ವಿಕೆಟ್ ಪಡೆಯುವುದರೊಂದಿಗೆ ಒಟ್ಟು  1347 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.