ಸಾಮಾನ್ಯವಾಗಿ ಬಿಸಿಸಿಐ ಈ ಮೊತ್ತವನು ಪಂದ್ಯ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಪಾವತಿಸಲಿದೆ. ಆದರೆ ಈ ಬಾರಿ ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ನವದೆಹಲಿ(ಅ.20): 2017-18ರ ದೇಸಿ ಋತು ಆರಂಭಗೊಂಡು ಕೆಲ ತಿಂಗಳುಗಳೇ ಕಳೆದರೂ, ಪಂದ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 115 ಅಂಪೈರ್‌ಗಳು, 62 ಮ್ಯಾಚ್ ರೆಫ್ರಿಗಳು, 170 ವೀಡಿಯೋ ವಿಶ್ಲೇಷಕರು, 150 ಸ್ಕೋರರ್‌'ಗಳಿಗೆ ಬಿಸಿಸಿಐ ಇನ್ನೂ ದಿನನಿತ್ಯದ ಭತ್ಯೆ ಪಾವತಿಸಿಲ್ಲ. ಅಧಿಕಾರಿಗಳಿಗೆ ದಿನಕ್ಕೆ ₹750 ಭತ್ಯೆ ಸಿಗಬೇಕಿದೆ. ಸಾಮಾನ್ಯವಾಗಿ ಬಿಸಿಸಿಐ ಈ ಮೊತ್ತವನು ಪಂದ್ಯ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಪಾವತಿಸಲಿದೆ. ಆದರೆ ಈ ಬಾರಿ ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ಮುಂದಿನ ಕೆಲ ದಿನಗಳಲ್ಲಿ ಬಿಸಿಸಿಐ ಭತ್ಯೆ ಪಾವತಿಸಲಿದೆಯೇ ಎನ್ನುವ ಬಗ್ಗೆ ಸಹ ಖಚಿತತೆ ಇಲ್ಲ. ‘ವೀಡಿಯೋ ವಿಶ್ಲೇಷಕರು, ಸ್ಕೋರರ್‌'ಗಳು ದೊಡ್ಡ ಕುಟುಂಬದವರಲ್ಲ. ಸಾಮಾನ್ಯ ಕೆಲಸಗಳನ್ನು ಮಾಡಿಕೊಂಡ ಜೀವನ ಸಾಗಿಸುವವರು ನಾವು. ಸತತವಾಗಿ 3 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು ನನಗೆ ಸೂಚಿಸಲಾಗಿದೆ. ಕೈಯಿಂದ ಹಣ ಹಾಕಿಕೊಂಡು ಮುಂದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸಲು ತೆರಳುವುದು ಕಷ್ಟವಾಗಲಿದೆ’ ಎಂದು ವೀಡಿಯೋ ವಿಶ್ಲೇಷಕರೊಬ್ಬರು ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

‘ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಬಹುತೇಕರು ಹೆದರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಂದ್ಯಗಳನ್ನು ನೀಡದಿದ್ದರೆ ಎನ್ನುವ ಭೀತಿ ಎಲ್ಲರಲ್ಲೂ ಇದೆ. ಪಂದ್ಯಗಳ ವೇಳೆ ಬಿಸಿಸಿಐ 5-ಸ್ಟಾರ್ ಹೋಟೆಲ್'ಗಳಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸುತ್ತದೆ. ಅಲ್ಲಿ ಒಮ್ಮೆ ಊಟಕ್ಕೆ ₹1500ರಷ್ಟು ಖರ್ಚಾಗುತ್ತದೆ. ಆದರೆ ನಮಗೆ ಸಿಗುವ ದೈನಂದಿನ ಭತ್ಯೆ ಕೇವಲ ₹750. ಮೊದಲೆಲ್ಲಾ ಬಿಸಿಸಿಐನಿಂದ ಈ ರೀತಿ ಸಮಸ್ಯೆಯಾಗುತ್ತಿರಲಿಲ್ಲ. ಇತ್ತೀಚೆಗೆ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದೇವೆ’ ಎಂದಿದ್ದಾರೆ. ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.