ಒಡಿಶಾ ಜುಗರ್‌ನಟ್ಸ್ ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್ ಚಾಂಪಿಯನ್ತೆಲುಗು ಯೋಧಾಸ್ ಎದುರು 1 ಅಂಕಗಳ ರೋಚಕ ಜಯ ಸಾಧಿಸಿದ ಒಡಿಶಾ ಜುಗರ್‌ನಟ್ಸ್‌ಚಾಂಪಿಯನ್ ಪಟ್ಟ ಅಲಂಕರಿಸಿದ ಒಡಿಶಾ ತಂಡಕ್ಕೆ 1 ಕೋಟಿ ರುಪಾಯಿ ನಗದು ಬಹುಮಾನ
ಪುಣೆ(ಸೆ.05): ಸೂರಜ್ ಲಾಂಡೆ ಅವರ ಅದ್ಭುತ ಸ್ಕೈ ಡೈವ್ ನೆರವಿನಿಂದ ಒಡಿಶಾ ಜುಗರ್‌ನಟ್ಸ್ ತಂಡವು ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಒಡಿಶಾ ಜುಗರ್‌ನಟ್ಸ್ ತಂಡವು 46-45 ಅಂಕಗಳ ಅಂತರದಲ್ಲಿ ತೆಲುಗು ಯೋಧಾಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಶ್ರೀ ಶಿವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಅಲ್ಟಿಮೇಟ್ ಖೋ ಖೋ ಫೈನಲ್ ಪಂದ್ಯದಲ್ಲಿ ಕೊನೆಯ ಕ್ಷಣದವರೆಗೂ ಉಭಯ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ತುರುಸಿನ ಪೈಪೋಟಿ ನೀಡುವ ಮೂಲಕ ಖೋ ಖೋ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಮೂರನೇ ಸುತ್ತಿನ ಬಳಿಕ ತೆಲುಗು ಯೋಧಾಸ್ ತಂಡವು 21 ಅಂಕಗಳನ್ನು ಕಲೆಹಾಕುವ ಮೂಲಕ 41-27 ಅಂಕಗಳ ಮುನ್ನಡೆ ಸಾಧಿಸಿತು. ಸಚಿನ್ ಭಾರ್ಗೊ ಎರಡು ಮಹತ್ವದ ಅಂಕಗಳನ್ನು ಕಲೆಹಾಕುವ ಮೂಲಕ ಕೊನೆಯ 2.44 ನಿಮಿಷಗಳವರೆಗೂ ಒಡಿಶಾ ತಂಡವು ಹಿನ್ನಡೆಯಲ್ಲಿರುವಂತೆ ಮಾಡಿದರು. ಆದರೆ ಪಂದ್ಯ ಮುಕ್ತಾಯಕ್ಕೆ ಕೇವಲ 1.24 ನಿಮಿಷಗಳು ಬಾಕಿ ಇದ್ದಾಗ ಸಚಿನ್‌ರನ್ನು ಔಟ್ ಮಾಡುವಲ್ಲಿ ಒಡಿಶಾ ತಂಡವು 43-45 ಅಂಕಗಳ ಹಿನ್ನಡೆಯಲ್ಲಿತ್ತು.
ಆದರೆ ಮೂರನೇ ಸುತ್ತಿನ ಡಿಫೆನ್ಸ್‌ನಲ್ಲಿ 3.03 ನಿಮಿಷಗಳ ಕಾಲ ಅದ್ಭತ ಪ್ರದರ್ಶನ ತೋರಿದ್ದ ಒಡಿಶಾ ಜುಗರ್‌ನಟ್ಸ್ ತಂಡದ ಸೂರಜ್ ಲಾಂಡೆ, ಪಂದ್ಯ ಮುಕ್ತಾಯಕ್ಕೆ ಕೇವಲ 14 ಸೆಕೆಂಡ್‌ಗಳು ಬಾಕಿ ಇರುವಾಗ ಅದ್ಭುತ ಸ್ಕೈ ಡೈವ್ ಮಾಡುವ ಮೂಲಕ ಅವದೂತ್ ಪಾಟೀಲ್ ಅವರನ್ನು ಔಟ್ ಮಾಡುವ ಮೂಲಕ 3 ಅಂಕಗಳನ್ನು ಗಳಿಸುವುದರೊಂದಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು.
ದಾಳಿ ವಿಭಾಗದಲ್ಲಿ ಸೂರಜ್ ಲಾಂಡೆ ಒಡಿಶಾ ಪರ 9 ಅಂಕಗಳನ್ನು ಕಲೆಹಾಕಿದರೆ, ತೆಲುಗು ಯೋಧಾಸ್ ಪರ ರೋಹನ್ ಸಿಂಘಾಡೆ 11 ಅಂಕಗಳನ್ನು ಗಳಿಸಿ ಮಿಂಚಿದರಾದರೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ವಿಫಲರಾದರು.
Ultimate Kho Kho ಗುಜರಾತ್ ಜೈಂಟ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ತೆಲುಗು ಯೋಧಾಸ್..!
ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಒಡಿಶಾ ಜುಗರ್‌ನಟ್ಸ್ ತಂಡವು 1 ಕೋಟಿ ರುಪಾಯಿ ನಗದು ಬಹುಮಾನ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇನ್ನು ರನ್ನರ್ ಅಪ್ ಸ್ಥಾನ ಪಡೆದ ತೆಲುಗು ಯೋಧಾಸ್ ತಂಡವು 50 ಲಕ್ಷ ರುಪಾಯಿ ನಗದು ಬಹುಮಾನವನ್ನು ಬಾಚಿಕೊಂಡಿತು. ಇನ್ನು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸಿದ ಗುಜರಾತ್ ಜೈಂಟ್ಸ್ ತಂಡವು 30 ಲಕ್ಷ ರುಪಾಯಿ ನಗದು ಬಹುಮಾನ ಪಡೆಯಿತು.
ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಚೆನ್ನೈ ಕ್ವಿಕ್ ಗನ್ಸ್, ಗುಜರಾತ್ ಜೈಂಟ್ಸ್, ಮುಂಬೈ ಕಿಲಾಡೀಸ್, ಒಡಿಶಾ ಜುಗರ್‌ನಟ್ಸ್, ರಾಜಸ್ಥಾನ ವಾರಿಯರ್ಸ್ ಹಾಗೂ ತೆಲುಗು ಯೋಧಾಸ್ ಹೀಗೆ ಒಟ್ಟು 6 ತಂಡಗಳು ಪಾಲ್ಗೊಂಡಿದ್ದವು. 22 ದಿನಗಳ ಕಾಲ ನಡೆದ ಈ ಅಲ್ಟಿಮೇಟ್ ಖೋ ಖೋ ಟೂರ್ನಿಯು ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು.
ಇನ್ನು 11 ಪಂದ್ಯಗಳಿಂದ 9 ಡೈವ್ ಸಹಿತ 89 ಅಂಕಗಳನ್ನು ಕಲೆಹಾಕಿದ ಗುಜರಾತ್ ಜೈಂಟ್ಸ್ ತಂಡದ ಅಭಿನಂದನ್ ಪಾಟೀಲ್ ಅಟ್ಯಾಕರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿ ಪಡೆದರು. ಇನ್ನು 11 ಪಂದ್ಯಗಳಿಂದ 19.32 ನಿಮಿಷಗಳ ಕಾಲ ಡಿಫೆನ್ಸ್‌ನಲ್ಲಿ ಮಿಂಚಿದ ತೆಲುಗು ಯೋಧಾಸ್ ತಂಡ ದೀಪಕ್ ಮಹದೇವ, ಡಿಫೇಂಡರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದರು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಗನ್ಸ್ ತಂಡದ ರಾಮ್ಜಿ ಕಶ್ಯಪ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ರಾಮ್ಜಿ ಕಶ್ಯಪ್ ಕೇವಲ 10 ಪಂದ್ಯಗಳಲ್ಲಿ ಒಟ್ಟು 108 ಅಂಕಗಳನ್ನು ಗಳಿಸಿ ಮಿಂಚಿದ್ದರು.
