ಸದ್ಯ ಟೂರ್ನಿಯಲ್ಲಿ ಅಜೇಯ ಓಟ ಕಾಯ್ದುಕೊಂಡು ಕ್ವಾರ್ಟರ್‌'ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರೂ, ಮತ್ತೆ ರಣಜಿ ಚಾಂಪಿಯನ್ನರಾಗಬೇಕೆಂಬ ಗುರಿ ಹೊತ್ತಿರುವ ಕರ್ನಾಟಕ ಅದರ ಸಾಕಾರಕ್ಕಾಗಿ ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ.
ನವದೆಹಲಿ(ನ.24): ಈ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಮೊಟ್ಟಮೊದಲ ಗೆಲುವು ಸಾಧಿಸಲು ತುಡಿಯುತ್ತಿದ್ದ ಒಡಿಶಾಗೆ ಭ್ರಮನಿರಸನ ಉಂಟುಮಾಡಿದ ವಿಕೆಟ್ಕೀಪರ್ ಸಿ.ಕೆ. ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಕರ್ನಾಟಕವನ್ನು ಬಹುದೊಡ್ಡ ಅಪಾಯದಿಂದ ಪಾರುಮಾಡಿದರು.
ಇಲ್ಲಿನ ಏರ್'ಫೋರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಕರ್ನಾಟಕ, ಮೊದಲ ಇನ್ನಿಂಗ್ಸ್ನಲ್ಲಿ ಅನುಭವಿಸಿದ್ದ ಬ್ಯಾಟಿಂಗ್ ವೈಫಲ್ಯವನ್ನು ಮೆಟ್ಟಿನಿಂತು ಪಂದ್ಯವನ್ನು ಡ್ರಾ ಮಾಡಿಕೊಂಡು ಕೇವಲ ಒಂದು ಅಂಕಕ್ಕೆ ತೃಪ್ತವಾಯಿತು. ಆದರೆ, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಒಡಿಶಾ ಮೂರು ಅಂಕಗಳನ್ನು ತನ್ನದಾಗಿಸಿಕೊಂಡಿತು.
ವಿಕೆಟ್'ಕೀಪರ್ ಸಿ.ಎಂ. ಗೌತಮ್ (95: 240 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ (77: 130 ಎಸೆತ, 4 ಬೌಂಡರಿ) ಅವರ ಪರಿಶ್ರಮದ ಫಲವಾಗಿ ಕರ್ನಾಟಕ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿತು.
ಗೆಲ್ಲಲು 231 ರನ್ ಗುರಿ ಪಡೆದ ಒಡಿಶಾ, ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 32 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿದ್ದಾಗ ಇತ್ತಂಡಗಳ ನಾಯಕರೂ ಡ್ರಾಗೆ ಮಾಡಿಕೊಳ್ಳಲು ಸಮ್ಮತಿಸಿದರು. ಆರಂಭಿಕರಾದ ಸಂದೀಪ್ ಪಾಟೀಲ್ (27) ಮತ್ತು ರಂಜಿತ್ ಸಿಂಗ್ (35) ಅಜೇಯರಾಗಿ ಉಳಿದುಕೊಂಡರು. ಮೊದಲ ಇನ್ನಿಂಗ್ಸ್ನಲ್ಲಿ 85 ರನ್ ಗಳಿಸಿ ತಂಡ ಮುನ್ನಡೆ ಕಾಣಲು ನೆರವಾದ ವಿಕೆಟ್ಕೀಪರ್ ಸೌರಭ್ ರಾವತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಎಚ್ಚರಿಕೆಯ ಕರೆಗಂಟೆ
ಒಡಿಶಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡ ಕರ್ನಾಟಕ, ‘ಬಿ’ ಗುಂಪಿನಲ್ಲಿ ಇಲ್ಲೀವರೆಗಿನ 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಮತ್ತು ಎರಡರಲ್ಲಿ ಡ್ರಾ ಸಾಧಿಸಿ 30 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಮುನ್ನಡೆದಿದೆ. ಇತ್ತ, ಇಷ್ಟೇ ಪಂದ್ಯಗಳಿಂದ ತಲಾ ಮೂರರಲ್ಲಿ ಗೆಲುವು ಮತ್ತು ಡ್ರಾ ಸಾಧಿಸಿರುವ ಜಾರ್ಖಂಡ್ ತಂಡ 26 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಅಂದಹಾಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೂ, ಕರ್ನಾಟಕ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ. ಸದ್ಯ ಟೂರ್ನಿಯಲ್ಲಿ ಅಜೇಯ ಓಟ ಕಾಯ್ದುಕೊಂಡು ಕ್ವಾರ್ಟರ್'ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರೂ, ಮತ್ತೆ ರಣಜಿ ಚಾಂಪಿಯನ್ನರಾಗಬೇಕೆಂಬ ಗುರಿ ಹೊತ್ತಿರುವ ಕರ್ನಾಟಕ ಅದರ ಸಾಕಾರಕ್ಕಾಗಿ ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ. ಸದ್ಯದ ಅದರ ಹೋರಾಟವು ಇನ್ನಷ್ಟು ಪ್ರಖರತೆ ಪಡೆಯಬೇಕಾದುದು ಅನಿವಾರ್ಯವೆಂಬುದನ್ನು ಒಡಿಶಾ ಪಂದ್ಯ ಮನವರಿಕೆ ಮಾಡಿಕೊಟ್ಟಿದೆ.
ಆಪದ್ಬಾಂಧವರಾದ ಗೌತಮ್, ಶ್ರೇಯಸ್
ಒಡಿಶಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕಕ್ಕೆ ಆಪದ್ಬಾಂಧವನಾಗಿ ಪರಿಣಮಿಸಿದ್ದು ಸಿ.ಕೆ. ಗೌತಮ್. ಕೇವಲ ಈ ಪಂದ್ಯದಲ್ಲಷ್ಟೇ ಕಳೆದ ಐದು ಪಂದ್ಯಗಳಲ್ಲಿಯೂ ಅವರು ಮಧ್ಯಮ ಕ್ರಮಾಂಕದಲ್ಲಿ ರಾಜ್ಯದ ಪರ ನೀಡುತ್ತಿರುವ ಪ್ರದರ್ಶನ ಅತ್ಯಾಕರ್ಷಕವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ 54 ರನ್ ಗಳಿಸಿ ತಂಡ ನಿಕೃಷ್ಟ ಮೊತ್ತಕ್ಕೆ ಕುಸಿಯಬಹುದಾಗಿದ್ದುದನ್ನು ತಪ್ಪಿಸಿದ್ದ ಗೌತಮ್, ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಅವರೊಂದಿಗೆ ಶ್ರೇಯಸ್ ಗೋಪಾಲ್ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಒಡಿಶಾ ಬೃಹತ್ ಮೊತ್ತಕ್ಕೆ ತಡೆ ಹಾಕಿದ್ದರಲ್ಲದೆ, ಎರಡನೇ ಇನ್ನಿಂಗ್ಸ್ನಲ್ಲಿ ಅಮೋಘ ಅರ್ಧಶತಕ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದರು. ಇನ್ನು, 6 ವಿಕೆಟ್ಗೆ 244 ರನ್ಗಳೊಂದಿಗೆ ಮೂರನೇ ದಿನದಾಟ ಮುಂದುವರೆಸಿದ ಈ ಇಬ್ಬರು ಆಪದ್ಬಾಂಧವರು ಕರ್ನಾಟಕವನ್ನು ಸುರಕ್ಷತೆಯ ದಡ ಮುಟ್ಟಿಸುವಲ್ಲಿ ಸಫಲವಾದರು. ಕ್ರಮವಾಗಿ 68 ಮತ್ತು 11 ರನ್ ಗಳಿಸಿದ್ದ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಕೊನೆಯ ದಿನದಾಟವನ್ನು ಕೌತುಕವಾಗಿಸಿದ್ದರು. ಅತ್ಯುತ್ತಮ ಜತೆಯಾಟವಾಡಿದ ಈ ಜೋಡಿ ಒಡಿಶಾ ತಂಡದ ಗೆಲುವಿನ ಆಸೆಯನ್ನು ಚಿವುಟಿತು. ಅತ್ಯಂತ ಸಹನೆಯ ಆಟವಾಡಿದ ಗೌತಮ್, ಸೂರ್ಯಕುಮಾರ್ ಪ್ರಧಾನ್ ಬೌಲಿಂಗ್ನಲ್ಲಿ ವಿಕೆಟ್'ಕೀಪರ್ ರಾವತ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಕೇವಲ 5 ರನ್ಗಳ ಅಂತರದಿಂದ ಶತಕವಂಚಿತರಾದ ಗೌತಮ್, 7ನೇ ವಿಕೆಟ್ಗೆ ಶ್ರೇಯಸ್ ಜತೆಗೆ 69 ರನ್ ರನ್ ಕಲೆಹಾಕಿದರು. ಅವರ ನಿರ್ಗಮನದ ನಂತರ ಜತೆಯಾದ ಕೆ. ಗೌತಮ್ (46: 62 ಎಸೆತ, 3 ಬೌಂಡರಿ, 1 ಸಿಕ್ಸರ್) ಕೂಡ ಬ್ಯಾಟಿಂಗ್ನಲ್ಲಿ ಕರ್ನಾಟಕಕ್ಕೆ ಆಸರೆಯಾದರು. ಒಡಿಶಾ ಪರ ಸ್ಪಿನ್ನರ್ ಮೀರಜ್ ಸಿಂಗ್ 98ಕ್ಕೆ 5 ವಿಕೆಟ್ ಪಡೆದು ಗಮನ ಸೆಳೆದರೆ, ನಾಯಕ ಗೋವಿಂದ ಪೊದ್ದರ್ 60ಕ್ಕೆ 2 ವಿಕೆಟ್ ಗಳಿಸಿದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್: 179
ಒಡಿಶಾ ಮೊದಲ ಇನ್ನಿಂಗ್ಸ್: 342
ಕರ್ನಾಟಕ ಎರಡನೇ ಇನ್ನಿಂಗ್ಸ್ : 393
ಒಡಿಶಾ ದ್ವಿತೀಯ ಇನ್ನಿಂಗ್ಸ್
32 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63
ಪಂದ್ಯಶ್ರೇಷ್ಠ: ಸೌರಭ್ ರಾವತ್
