Asianet Suvarna News Asianet Suvarna News

ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಒಡಿಶಾ

ಈ ಋತುವಿನ ರಣಜಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಮುಂದುವರೆದಿದ್ದ ಕರ್ನಾಟಕಕ್ಕೆ ಒಂದು ವಿಧದಲ್ಲಿ ಒಡಿಶಾ ಅಕ್ಷರಶಃ ಸವಾಲೆಸೆದಿದೆ

Odessa Leads by Innings

ನವದೆಹಲಿ(ನ.22): ಲೆಗ್‌'ಸ್ಪಿನ್ನರ್ ಶ್ರೇಯಸ್ ಗೋಪಾಲ್ (73ಕ್ಕೆ 5) ಅವರ ಪ್ರತಿರೋಧಾತ್ಮಕ ಚಮತ್ಕಾರಿ ಬೌಲಿಂಗ್‌'ನ ನಡುವೆಯೂ ಮಧ್ಯಮ ಕ್ರಮಾಂಕಿತ ಆಟಗಾರರಾದ ಬಿಪ್ಲಬ್ ಸಮಂಟ್ರೆ (58: 190 ಎಸೆತ, 6 ಬೌಂಡರಿ) ಹಾಗೂ ವಿಕೆಟ್‌'ಕೀಪರ್ ಸೌರಭ್ ರಾವತ್ (85: 124 ಎಸೆತ, 12 ಬೌಂಡರಿ, 1 ಸಿಕ್ಸರ್) ದಾಖಲಿಸಿದ ಸೊಗಸಾದ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡದ ವಿರುದ್ಧ ಒಡಿಶಾ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಯಶ ಕಂಡಿದೆ.

ಇಲ್ಲಿನ ಏರ್‌'ಫೋರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ರಣಜಿ ಪಂದ್ಯದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಗೋವಿಂದ ಪೊದ್ದರ್ ಸಾರಥ್ಯದ ಒಡಿಶಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 111 ಓವರ್‌ಗಳಲ್ಲಿ 9 ವಿಕೆಟ್‌ಗೆ 318 ರನ್ ಗಳಿಸಿ ಆ ಮೂಲಕ 139 ರನ್ ಮುನ್ನಡೆ ಸಾಧಿಸಿತು. ದಿನದಾಟ ನಿಂತಾಗ ಬಸಂತ್ ಮೊಹಾಂತಿ (16) ಮತ್ತು ಅಲೋಕ್ ಮಂಗರಾಜ್ (10) ಹತ್ತನೇ ವಿಕೆಟ್‌'ಗೆ ಮುರಿಯದ 26 ರನ್ ಕಲೆಹಾಕಿದ್ದು ತೃತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ಹಿನ್ನಡೆ

ಈ ಋತುವಿನ ರಣಜಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಮುಂದುವರೆದಿದ್ದ ಕರ್ನಾಟಕಕ್ಕೆ ಒಂದು ವಿಧದಲ್ಲಿ ಒಡಿಶಾ ಅಕ್ಷರಶಃ ಸವಾಲೆಸೆದಿದೆ. ಅದರಲ್ಲೂ ಕಳೆದ ಐದು ಪಂದ್ಯಗಳಲ್ಲಿಯೂ ಆಕ್ರಮಣಕಾರಿ ಆಟವಾಡಿದ್ದ ಕರ್ನಾಟಕ ಇದೇ ಮೊದಲ ಬಾರಿಗೆ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ. ಉಳಿದ ಒಂದು ವಿಕೆಟ್‌ನಲ್ಲಿ ಒಡಿಶಾ ಹೆಚ್ಚೇನೂ ರನ್ ಗಳಿಸಲು ಸಾಧ್ಯವಾಗದೆ ಹೋದರೂ, ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಎಸಗಿದ ಬ್ಯಾಟಿಂಗ್ ಪ್ರಮಾದವು ಪುನರಾವರ್ತಿಸದಂತೆ ನೋಡಿಕೊಳ್ಳಬೇಕಿದೆ.

ಭರ್ಜರಿ ಜತೆಯಾಟ

ಭೋಜನ ವಿರಾಮಕ್ಕೆ 5 ವಿಕೆಟ್‌ಗೆ 125 ರನ್ ಕಲೆಹಾಕಿದ ಒಡಿಶಾ, ಆ ಬಳಿಕ ಕರ್ನಾಟಕ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿತು. ಮುಖ್ಯವಾಗಿ ಬಿಪ್ಲಬ್ ಸಮಂಟ್ರೆ ಮತ್ತು ಅಭಿಷೇಕ್ ಯಾದವ್ ಕೆಲಹೊತ್ತು ಆಕರ್ಷಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ನಿಧಾನಗತಿಯಲ್ಲಿ ಏರಿಸಿದರು. ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್‌'ಗೆ ಕರ್ನಾಟಕ ನಾಯಕ ವಿನಯ್ ಕುಮಾರ್ ಪೆವಿಲಿಯನ್ ದಾರಿ ತೋರಿದರು. 79 ಎಸೆತಗಳನ್ನು ಎದುರಿಸಿದ ಅಭಿಷೇಕ್ 5 ಬೌಂಡರಿಗಳುಳ್ಳ 33 ರನ್ ಗಳಿಸಿದ್ದಾಗ ವಿಕೆಟ್‌ಕೀಪರ್ ಸಿ.ಎಂ. ಗೌತಮ್‌'ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಅಲ್ಲಿಂದಾಚೆಗೆ ಕರ್ನಾಟಕವನ್ನು ಕಾಡಿದ್ದು ಸಮಂಟ್ರೆ ಹಾಗೂ ಸೌರಭ್. ಈ ಜೋಡಿ 7ನೇ ವಿಕೆಟ್‌ಗೆ ಕಲೆಹಾಕಿದ 106 ರನ್‌ಗಳು ಒಡಿಶಾ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕವೆನಿಸಿತು. ಇವರೊಂದಿಗೆ ಸೂರ್ಯಕಾಂತ್ ಪ್ರಧಾನ್ (23) ವಿಕೆಟ್ ಪಡೆದ ಶ್ರೇಯಸ್ ಗೋಪಾಲ್ ರಣಜಿಯಲ್ಲಿ ಮತ್ತೊಮ್ಮೆ ಐದು ವಿಕೆಟ್‌ಗಳ ಸಾಧನೆ ಮಾಡಿದರು.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನ್ನಿಂಗ್ಸ್: 179

ಒಡಿಶಾ ಮೊದಲ ಇನ್ನಿಂಗ್ಸ್

111 ಓವರ್‌ಗಳಲ್ಲಿ 9 ವಿಕೆಟ್‌ಗೆ 318

Follow Us:
Download App:
  • android
  • ios