ಸಿನ್ಸಿನಾಟಿ ಓಪನ್: ಫೆಡರರ್ ಮಣಿಸಿ ಹೊಸ ಇತಿಹಾಸ ಬರೆದ ಜೋಕೋವಿಕ್
ಸಿನ್ಸಿನಾಟಿ ಓಪನ್’ ಟೆನಿಸ್ ಟೂರ್ನಿಯಲ್ಲಿ 5 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಜೋಕೋವಿಕ್, ಇದೇ ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್ ಆಗಿದ್ದ ರೋಜರ್ ಫೆಡರರ್ ಅವರನ್ನು 6-4, 6-4 ನೇರ ಸೆಟ್’ಗಳಲ್ಲಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ನ್ಯೂಯಾರ್ಕ್[ಆ.20]: ಮಾಜಿ ನಂ.1 ಶ್ರೇಯಾಂಕಿತ ನೋವಾಕ್ ಜೋಕೋವಿಕ್ ಅಮೆರಿಕದ ಸಿನ್ಸಿನಾಟಿ ಓಪನ್ ಫೈನಲ್‌ನಲ್ಲಿ ರೋಜರ್ ಫೆಡರರ್ ಮಣಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಎಲ್ಲಾ 9 ಮಾಸ್ಟರ್ಸ್ ಟ್ರೋಫಿ ಗೆದ್ದ ಮೊದಲ ಆಟಗಾರ ಎನ್ನುವ ಕೀರ್ತಿಗೆ ಜೋಕೋವಿಕ್ ಪಾತ್ರರಾಗಿದ್ದಾರೆ.
ಸಿನ್ಸಿನಾಟಿ ಓಪನ್’ ಟೆನಿಸ್ ಟೂರ್ನಿಯಲ್ಲಿ 5 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಜೋಕೋವಿಕ್, ಇದೇ ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್ ಆಗಿದ್ದ ರೋಜರ್ ಫೆಡರರ್ ಅವರನ್ನು 6-4, 6-4 ನೇರ ಸೆಟ್’ಗಳಲ್ಲಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಕಳೆದ ಮೂರು ಆವೃತ್ತಿಗಳಲ್ಲಿ ಫೆಡರರ್ ವಿರುದ್ಧ ಮುಗ್ಗರಿಸಿದ್ದ ಸರ್ಬಿಯಾದ ಆಟಗಾರ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ.
ವೃತ್ತಿಜೀವನದ 99ನೇ ಪ್ರಶಸ್ತಿಯ ಕನಸು ಕಾಣುತ್ತಿದ್ದ ಫೆಡಡರ್ ಕನಸು ಸಧ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ.
ಸಿನ್ಸಿನಾಟಿ ಟ್ರೋಫಿಯನ್ನು ಇದೇ ಮೊದಲ ಬಾರಿಗೆ ಎತ್ತಿ ಹಿಡಿಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ, ಇದು ನನ್ನ ಪಾಲಿಗೆ ವಿಶೇಷ ಕ್ಷಣ ಎಂದು ಜೋಕೋವಿಕ್ ಸಂತಸ ವ್ಯಕ್ತಪಡಿಸಿದರೆ, ತಮ್ಮ ವೃತ್ತಿಬದುಕಿನ 150ನೇ ಫೈನಲ್ ಆಡಿದ ಫೆಡರರ್, ನಿಮ್ಮ ವೃತ್ತಿಜೀವನದ ಸಾಧನೆ ಇದೇ ರೀತಿ ಮುಂದುವರೆಯಲಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ.