Asianet Suvarna News Asianet Suvarna News

US Open 2023: ನೋವಾಕ್ ಜೋಕೋವಿಚ್ vs ಮೆಡ್ವೆಡೆವ್ ಫೈನಲ್ ಫೈಟ್

ಅಗ್ರ ಶ್ರೇಯಾಂಕಿತ, ಸ್ಪೇನ್‌ನ ಕಾರ್ಲೊಸ್‌ ಆಲ್ಕರಜ್‌ ಈ ಬಾರಿ ಯುಎಸ್‌ ಓಪನ್‌ ಫೈನಲ್‌ಗೇರುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದರು. ಆದರೆ ಹಾಲಿ ಚಾಂಪಿಯನ್‌ ಕೂಡಾ ಆಗಿರುವ 20ರ ಕಾರ್ಲೊಸ್‌ ಓಟಕ್ಕೆ ರಷ್ಯಾದ ಮೆಡ್ವೆಡೆವ್‌ ತಡೆ ನೀಡಿದರು.

Novak Djokovic Daniil Medvedev Set For US Open Final Showdown kvn
Author
First Published Sep 10, 2023, 10:19 AM IST

ನ್ಯೂಯಾರ್ಕ್‌(ಸೆ.10): ದಾಖಲೆಯ 24ನೇ ಗ್ರ್ಯಾನ್‌ಸ್ಲಾಂ ಗೆಲುವಿಗೆ ಎದುರು ನೋಡುತ್ತಿರುವ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಯುಎಸ್ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಮತ್ತೆ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 2021ರ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ ಪ್ರಶಸ್ತಿ ಸುತ್ತಿಗೇರಿದ್ದು, ಭಾರತೀಯ ಕಾಲಮಾನ ಸೋಮವಾರ ಬೆಳಗಿನ ಜಾವ ಯುಎಸ್‌ ಓಪನ್‌ ಕಿರೀಟಕ್ಕಾಗಿ ಪರಸ್ಪರ ಸೆಣಸಾಡಲಿದ್ದಾರೆ.

ಶನಿವಾರ ಬೆಳಗಿನ ಜಾವ ನಡೆದ ಪುರುಷರ ಸಿಂಗಲ್ಸ್‌ ಸೆಮೀಸ್‌ನಲ್ಲಿ ನೂತನ ವಿಶ್ವ ನಂ.1 ಜೋಕೋ, ಶ್ರೇಯಾಂಕ ರಹಿತ ಅಮೆರಿಕದ ಆಟಗಾರ ಬೆನ್‌ ಶೆಲ್ಟನ್‌ ವಿರುದ್ಧ 6-3, 6-2, 7-6(7/4) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2011, 2015, 2018ರ ಚಾಂಪಿಯನ್‌ ಜೋಕೋ ದಾಖಲೆಯ 10ನೇ ಬಾರಿ ಫೈನಲ್‌ಗೇರಿದ್ದು, 4ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

US Open 2023: ರೋಹನ್ ಬೋಪಣ್ಣ ರನ್ನರ್‌-ಅಪ್‌! 2ನೇ ಬಾರಿಗೆ ಕೈತಪ್ಪಿದ ಪ್ರಶಸ್ತಿ!

ಆಲ್ಕರಜ್‌ಗೆ ಶಾಕ್‌!

ಅಗ್ರ ಶ್ರೇಯಾಂಕಿತ, ಸ್ಪೇನ್‌ನ ಕಾರ್ಲೊಸ್‌ ಆಲ್ಕರಜ್‌ ಈ ಬಾರಿ ಯುಎಸ್‌ ಓಪನ್‌ ಫೈನಲ್‌ಗೇರುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದರು. ಆದರೆ ಹಾಲಿ ಚಾಂಪಿಯನ್‌ ಕೂಡಾ ಆಗಿರುವ 20ರ ಕಾರ್ಲೊಸ್‌ ಓಟಕ್ಕೆ ರಷ್ಯಾದ ಮೆಡ್ವೆಡೆವ್‌ ತಡೆ ನೀಡಿದರು. ಸೆಮಿಫೈನಲ್‌ನಲ್ಲಿ ಮೆಡ್ವೆಡೆವ್ 7-6(7/3), 6-1, 3-6, 6-3 ಸೆಟ್‌ಗಳಲ್ಲಿ ಜಯಗಳಿಸಿದರು. ಮೊದಲೆರಡು ಸೆಟ್‌ಗಳನ್ನು ಕಳೆದುಕೊಂಡ ಬಳಿಕ 3ನೇ ಸೆಟ್‌ನಲ್ಲಿ ಆಲ್ಕರಜ್‌ ಗೆದ್ದರೂ, ಮತ್ತೆ ತಿರುಗೇಟು ನೀಡಿದ ಮೆಡ್ವೆಡೆವ್‌ 4ನೇ ಸೆಟ್‌ ಮೂಲಕ ಪಂದ್ಯ ತಮ್ಮದಾಗಿಸಿಕೊಂಡರು.

ಬ್ರೆಜಿಲ್‌ ಪರ ಹೆಚ್ಚು ಗೋಲು: ಪೀಲೆ ಹಿಂದಿಕ್ಕಿದ ನೇಯ್ಮರ್‌

ಸಾವೊ ಪೌಲೊ: ತಾರಾ ಫುಟ್ಬಾಲಿಗ ನೇಯ್ಮರ್‌ ಬ್ರೆಜಿಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೀಲೆ ಅವರ ಗರಿಷ್ಠ ಗೋಲುಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶನಿವಾರ ಬೊಲಿವಿಯಾ ವಿರುದ್ಧದ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ನೇಯ್ಮರ್‌ 2 ಗೋಲುಗಳನ್ನು ಬಾರಿಸಿದರು. ಇದರೊಂದಿಗೆ ತಮ್ಮ ಅಂ.ರಾ. ಗೋಲು ಗಳಿಕೆಯನ್ನು 79ಕ್ಕೆ ಏರಿಸಿ, ಬ್ರೆಜಿಲ್‌ನ ಸಾರ್ವಕಾಲಿಕ ಗರಿಷ್ಠ ಗೋಲಿನ ಸರದಾರ ಎನಿಸಿಕೊಂಡರು. 31 ವರ್ಷದ ನೇಯ್ಮರ್‌ ಬ್ರೆಜಿಲ್‌ ಪರ 125 ಪಂದ್ಯಗಳನ್ನಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಿಧನರಾದ ಪೀಲೆ 1957ರಿಂದ 1971ರ ವರೆಗೆ ಬ್ರೆಜಿಲ್‌ ಪರ 77 ಗೋಲುಗಳನ್ನು ಗಳಿಸಿದ್ದರು.

ಆ ಕರ್ಣನಂತೆ....! ತಂಡದಿಂದ ಹೊರಬಿದ್ದರೂ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಪ್ರಾರ್ಥಿಸಿದ ಶಿಖರ್ ಧವನ್..!

ಕಿಂಗ್ಸ್‌ ಕಪ್‌: 3ನೇ ಸ್ಥಾನಕ್ಕೆ ಇಂದು ಭಾರತ-ಲೆಬನಾನ್‌

ಚಿಯಾಂಗ್‌ ಮಾಯ್‌(ಥಾಯ್ಲೆಂಡ್‌): 49ನೇ ಆವೃತ್ತಿಯ, ಪ್ರತಿಷ್ಠಿತ ಕಿಂಗ್ಸ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ಭಾನುವಾರ 3ನೇ ಸ್ಥಾನಕ್ಕಾಗಿ ಲೆಬನಾನ್‌ ವಿರುದ್ಧ ಸೆಣಸಾಡಲಿದೆ. ನಾಕೌಟ್‌ ಮಾದರಿಯಲ್ಲಿ ನಡೆಯುವ ಟೂರ್ನಿಯ ಸೆಮಿಫೈನಲ್‌ನಲ್ಲಿ ಗುರುವಾರ ಇರಾಕ್‌ ವಿರುದ್ಧ ವೀರೋಚಿತ ಸೋಲು ಕಂಡಿದ್ದ ಭಾರತ ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾಯುತ್ತಿದೆ. ಈ ವರ್ಷ ಈಗಾಗಲೇ ಲೆಬನಾನ್‌ ವಿರುದ್ಧ ಭಾರತ 3 ಪಂದ್ಯಗಳನ್ನಾಡಿದ್ದು, 2ರಲ್ಲಿ ಗೆದ್ದು 1ರಲ್ಲಿ ಡ್ರಾ ಮಾಡಿಕೊಂಡಿದೆ. ಹೀಗಾಗು ತುಂಬು ಆತ್ಮವಿಶ್ವಾಸದೊಂದಿಗೆ ಪಂದ್ಯಕ್ಕೆ ಕಾಲಿಡಲಿದೆ. ಭಾರತ ಈ ಮೊದಲು 1977 ಮತ್ತು 2019ರಲ್ಲಿ 3ನೇ ಸ್ಥಾನ ಪಡೆದಿತ್ತು. ಭಾನುವಾರ ಫೈನಲ್‌ನಲ್ಲಿ ಆತಿಥೇಯ ಥಾಯ್ಲೆಂಡ್‌ ಹಾಗೂ ಇರಾಕ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ.
 

Follow Us:
Download App:
  • android
  • ios