ಎಟಿಪಿ ಫೈನಲ್ಸ್ ಎಂಬುದು ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಅಗ್ರ-8 ಆಟಗಾರರ ನಡುವೆ ನಡೆಯುವ ಟೂರ್ನಿ. ಕಳೆದ ವರ್ಷ ಪ್ರಶಸ್ತಿ ಗೆದ್ದು, ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ (6 ಪ್ರಶಸ್ತಿ)ರ ದಾಖಲೆ ಸರಿಗಟ್ಟಿದ್ದ ವಿಶ್ವ ನಂ.1 ಜೋಕೋ, ಈ ಬಾರಿ ಅವರನ್ನು ಹಿಂದಿಕ್ಕಿ ಅತಿಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಟ್ಯುರಿನ್‌(ಇಟಲಿ): 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ದಾಖಲೆಯ 7ನೇ ಬಾರಿ ಎಟಿಪಿ ಫೈನಲ್ಸ್‌ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಅವರು ಇಟಲಿಯ ಯುವ ತಾರೆ ಜಾನಿಕ್‌ ಸಿನ್ನರ್‌ ವಿರುದ್ಧ 6-3, 6-3 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.

ಎಟಿಪಿ ಫೈನಲ್ಸ್ ಎಂಬುದು ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಅಗ್ರ-8 ಆಟಗಾರರ ನಡುವೆ ನಡೆಯುವ ಟೂರ್ನಿ. ಕಳೆದ ವರ್ಷ ಪ್ರಶಸ್ತಿ ಗೆದ್ದು, ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ (6 ಪ್ರಶಸ್ತಿ)ರ ದಾಖಲೆ ಸರಿಗಟ್ಟಿದ್ದ ವಿಶ್ವ ನಂ.1 ಜೋಕೋ, ಈ ಬಾರಿ ಅವರನ್ನು ಹಿಂದಿಕ್ಕಿ ಅತಿಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಚೆಕ್‌ ಗಣರಾಜ್ಯದ ಇವಾನ್‌ ಲೆಂಡ್ಲ್‌, ಅಮೆರಿಕದ ಪೀಟ್‌ ಸ್ಯಾಂಪ್ರಸ್‌ ತಲಾ 5 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ವನಿತಾ ಟೆನಿಸ್: ಭಾರತದ 8 ಮಂದಿ ಪ್ರಧಾನ ಸುತ್ತಿಗೆ

ಬೆಂಗಳೂರು: ಐಟಿಎಫ್‌ ವಿಶ್ವ ಮಹಿಳಾ ಟೂರ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ 8 ಆಟಗಾರ್ತಿಯರು ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರಧಾನ ಸುತ್ತಿಗೇರಿದ್ದಾರೆ. ಸೋಮವಾರ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಯಶಸ್ವಿನಿ ಪನ್ವಾರ್‌, ಸೋನಲ್‌ ಪಾಟೀಲ್‌, ಸೌಮ್ಯಾ, ಪವನಿ, ಕುಂದಾಲಿ ಮಾಜ್‌ಗೈನ್‌, ವನ್ಶಿತಾ ಪಠಾಣಿಯಾ, ಪೂಜಾ, ಲಕ್ಷ್ಮಿ ಪ್ರಭಾ ಗೆಲುವು ಸಾಧಿಸಿದರು. ಮಂಗಳವಾರ ಪ್ರಧಾನ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿದ್ದು, ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಋತುಜಾ ಭೋಸಲೆ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾಗಿ ಕಣಕ್ಕಿಳಿಯಲಿದ್ದಾರೆ.

ಇಂದು ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಶುರು

ಶೆನ್‌ಝೆನ್(ಚೀನಾ): ಈ ಋತುವಿನ ಕೊನೆಯ ಬಿಡಬ್ಲ್ಯುಎಫ್ ಸೂಪರ್ ೭೫೦ ಟೂರ್ನಿಯಾಗಿರುವ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮಂಗಳವಾರದಿಂದ ಆರಂಭಗೊಳ್ಳಲಿದೆ. ಭಾರತದ ತಾರಾ ಶಟ್ಲರ್‌ಗಳು ಸುಧಾರಿತ ಪ್ರದರ್ಶನದೊಂದಿಗೆ, ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಬೇಕಾಗಿರುವ ಅಮೂಲ್ಯ ಅಂಕಗಳನ್ನು ಕಲೆಹಾಕುವ ಗುರಿ ಇಟ್ಟುಕೊಂಡಿದ್ದಾರೆ. 

ಗಾಯದಿಂದ ಚೇತರಿಸಿಕೊಂಡಿರುವ ಎಚ್.ಎಸ್.ಪ್ರಣಯ್ ಜೊತೆ ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್, ಪ್ರಿಯಾನ್ಶು ರಾಜಾವತ್ ಪುರುಷರ ಸಿಂಗಲ್ಸ್ ನಲ್ಲಿ ಕಣದಲ್ಲಿದ್ದು, ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಟೂರ್ನಿಯಲ್ಲಿ ಆಡಲಿರುವ ಏಕೈಕ ಭಾರತೀಯೆ. ತಾರಾ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ ಕೂಡಾ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಮಹಿಳಾ ಡಬಲ್ಸ್‌ನಲ್ಲಿ ರುತುಪರ್ಣ-ಶ್ವೇತಪರ್ಣ ಆಡಲಿದ್ದಾರೆ.