ಫಿಫಾ ವಿಶ್ವಕಪ್ ತಂಡದಿಂದ ಬ್ರೆಜಿಲ್ ಸ್ಟಾರ್ ಪ್ಲೇಯರ್ ನೆಯ್ಮಾರ್ ಔಟ್
ಫಿಫಾ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಬ್ರೆಜಿಲ್ ತಂಡಕ್ಕೆ ಬಾರಿ ಹೊಡೆತ ಬಿದ್ದಿದೆ. ತಂಡದ ಸ್ಟಾರ್ ಪ್ಲೇಯರ್ ನೇಯ್ಮಾರ್ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದಾರೆ.
ಬ್ರೆಜಿಲ್(ಜೂನ್.1) ಫಿಫಾ ವಿಶ್ವಕಪ್ ಫುಟ್ಬಾಲ್ ಆರಂಭಕ್ಕೆ ಇನ್ನು ಕೆಲ ದಿನಗಳೇ ಬಾಕಿ ಇರುವಾಗಲೇ ಬ್ರೆಜಿಲ್ ತಂಡಕ್ಕೆ ಸಂಕಷ್ಟ ಎದುರಾಗಿದೆ. ತಂಡದ ಸ್ಟಾರ್ ಪ್ಲೇಯರ್ ನೇಯ್ಮಾರ್ ತಂಡದಿಂದ ಹೊರಗುಳಿದಿದ್ದಾರೆ. ಪಾದದ ಗಾಯದಿಂದ ಬಳಲುತ್ತಿರುವ ನೇಯ್ಮಾರ್ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ನೇಯ್ಮಾರ್ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಬ್ರೆಜಿಲ್ ಫುಟ್ಬಾಲ್ ಕೋಚ್ ಎಡೆನೋರ್ ಲಿಯಾನಾರ್ಡೋ ಬಾಚಿ ಹೇಳಿದ್ದಾರೆ. ಇಷ್ಟೇ ಅಲ್ಲ, ಟೂರ್ನಿ ಆರಂಭದ ವೇಳೆ ನೇಯ್ಮಾರ್ ಸಂಪೂರ್ಣ ಫಿಟ್ ಆಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.
ಇನ್ನೆರಡು ವಾರದಲ್ಲಿ ತಾನು ಸಂಪೂರ್ಣ ಫಿಟ್ ಆಗೋದಾಗಿ ನೇಯ್ಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಶ್ವಕಪ್ ಆಡಲು ಉತ್ಸುಕನಾಗಿದ್ದೇನೆ. ಬಲಿಷ್ಠ ಆಟಗಾರರನ್ನೊಳಗೊಂಡಿರುವ ಬ್ರೆಜಿಲ್ ತಂಡ, 2018ರ ಫಿಫಾ ವಿಶ್ವಕಪ್ ಗೆಲ್ಲಲಿದೆ ಎಂದು ನೇಯ್ಮಾರ್ ಹೇಳಿದ್ದಾರೆ. ಜೂನ್ 14 ರಿಂದ ಫಿಫಾ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ರಶ್ಯಾದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಗೆ ಬ್ರೆಜಿಲ್ ಈಗಾಗಲೇ ತಯಾರಿ ಆರಂಭಿಸಿದೆ. ಇದೇ ಭಾನುವಾರ ಕ್ರೋವೇಶಿಯಾ ವಿರುದ್ಧ ಬ್ರೆಜಿಲ್ ಅಭ್ಯಾಸ ಪಂದ್ಯ ಆಯೋಜಿಸಿದೆ.
ಫಿಫಾ ವಿಶ್ವಕಪ್ ಫುಟ್ಬಾಲ್ 2018ರ ವೇಳಾಪಟ್ಟಿ ಹಾಗೂ ಪಂದ್ಯದ ಸಮಯ
ಜೂನ್ 14 ರಿಂದ ಆರಂಭವಾಗಲಿರುವ ಫುಟ್ಬಾಲ್ ಕ್ರೀಡಾಹಬ್ಬ ಜುಲೈ 15ವರಗೆ ನಡಯಲಿದೆ. 64 ಪಂದ್ಯಗಳನ್ನೊಳಗೊಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 32 ತಂಡಗಳು ಪಾಲ್ಗೊಳ್ಳುತ್ತಿವೆ. 8 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ 4 ತಂಡಗಳು ಇರಲಿವೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ರೌಂಡ್ 16 ಸುತ್ತಿಗೆ ಆಯ್ಕೆಯಾಗಲಿದೆ.