ರೇಪಿಸ್ಟ್‌ ಆಸ್ತಿ ಜಪ್ತಿ ಮಾಡಿ ಸಂತ್ರಸ್ತೆಗೆ ಪರಿಹಾರ- ಅತ್ಯಾಚಾರಿಯ ಮತದಾನ ಹಕ್ಕು ರದ್ದು

New Proposal Rapist Voting Power Cancel
Highlights

ತಜ್ಞರ ಸಮಿತಿ ನೀಡಿದ ಅಂತಿಮ ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವರದಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ಕೇವಲ ರಾಜ್ಯಕ್ಕೆ ಸೀಮಿತವಲ್ಲ. ಇದು ರಾಷ್ಟ್ರವ್ಯಾಪಿ ಇರುವ ಸಮಸ್ಯೆಯಾಗಿದೆ. ಅತ್ಯಾಚಾರ, ದೌರ್ಜನ್ಯ ತಡೆಗೆ ರಾಷ್ಟ್ರೀಯ ನೀತಿ ರೂಪಿಸುವ ಕುರಿತು ಕೇಂದ್ರ ಸರ್ಕಾರಕ್ಕೂ ವರದಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು(ಮಾ.24): ಅತ್ಯಾ​ಚಾ​ರಿಯ ಮತ​ದಾ​ನದ ಹಕ್ಕು ಶಾಶ್ವ​ತ​ವಾಗಿ ರದ್ದಾ​ಗ​ಬೇಕು. ಆತನ ಹೆಸ​ರಿ​ನ​ಲ್ಲಿ​ರುವ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ನೀಡು​ವಂತಾ​ಗಲು ಕಾನೂನು ರೂಪಿಸು​ವುದು ಸೇರಿ​ದಂತೆ ಅತ್ಯಾ​ಚಾರದಂತಹ ಅಪ​ರಾ​ಧ​ವನ್ನು ಎಸಗಿ ತಪ್ಪಿ​ತ​ಸ್ಥ​ರೆಂದು ನ್ಯಾಯಾ​ಲ​ಯ​ದಲ್ಲಿ ಶಿಕ್ಷೆಗೆ ಗುರಿ​ಯಾ​ಗು​ವ​ವ​ರ ಮೇಲೆ ಮತ್ತಷ್ಟುಉಗ್ರ ಕ್ರಮ​ಗ​ಳನ್ನು ಕೈಗೊ​ಳ್ಳು​ವಂತೆ​ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯು ರಾಜ್ಯ ಸರ್ಕಾ​ರಕ್ಕೆ ಶಿಫಾ​ರಸು ಮಾಡಿ​ದೆ.

ವಿಧಾನಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ನೇತೃತ್ವದ ತಜ್ಞರ ಸಮಿತಿಯು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 5089 ಪುಟಗಳ ಅಂತಿಮ ವರದಿಯನ್ನು ಸಲ್ಲಿಸಿತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್‌.ಉಗ್ರಪ್ಪ, ರಾಜ್ಯಾದ್ಯಂತ ಪ್ರವಾಸ ಮಾಡಿ, ಸುಮಾರು 135ಕ್ಕೂ ಹೆಚ್ಚು ಸಭೆಗಳನ್ನು ಸಮಿತಿ ನಡೆಸಿದೆ. 2015ರ ಡಿಸೆಂಬರ್‌ 30ರಂದು ಸಮಿತಿ ಪ್ರಾಥಮಿಕ ವರದಿಯಲ್ಲಿ 17 ಅಂಶಗಳ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಅಂತಿಮ ವರದಿ ನೀಡಿದ್ದು, 135 ಶಿಫಾರಸುಗಳನ್ನು ಮಾಡಲಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗುವ ಅಪರಾಧಿಗಳ ಮತದಾನದ ಹಕ್ಕನ್ನು ಶಾಶ್ವತವಾಗಿ ತೆಗೆಯಲು ಅನುಕೂಲವಾಗುವಂತೆ 1951ರ ಜನತಾ ಪ್ರಾತಿನಿಧ್ಯ ಕಾಯಿದೆಗೆ ಸೂಕ್ತ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅಪರಾಧವೆಸಗಿ ಜಾಮೀನಿನ ಮೇಲೆ ಅಥವಾ ನ್ಯಾಯಾಂಗ ಬಂಧನದಲ್ಲಿರುವ ಅವಧಿಯಲ್ಲಿ ಅರೋಪಿಗಳ ಮತದಾನದ ಹಕ್ಕು, ಸರ್ಕಾರದ ಸೌಲಭ್ಯಗಳನ್ನು, ಆಸ್ತಿಯ ಹಕ್ಕುಗಳನ್ನು ಅಮಾನತು​ಗೊ​ಳಿ​ಸಲು ಕಾನೂನು ರೂಪಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದರು.

ವಿಶೇಷ ನ್ಯಾಯಾಲಯ:

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಶೋಷಣೆ ಪ್ರಕರಣಗಳನ್ನಷ್ಟೇ ಇತ್ಯರ್ಥ ಮಾಡಲು ವಿಶೇಷ ನ್ಯಾಯಾಲಯಗಳನ್ನು ಒಂದು ವರ್ಷದಲ್ಲಿ ಸರ್ಕಾರ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು. ನ್ಯಾಯಾಧೀಶರು, ಪ್ರಾಸಿಕ್ಯೂಟರ್‌ಗಳ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕು. ಜಸ್ಟೀಸ್‌ ವರ್ಮಾ ಆಯೋಗದ ಶಿಫಾರಸಿನಂತೆ ಲಿಂಗ ಸಂವೇದನಾ ತರಬೇತಿ ಕಡ್ಡಾಯವಾಗಿ ನೀಡಬೇಕು ಎಂದರು.

ಪರಿಹಾರ ನೀಡಿಕೆ ಬದಲು:

ಕೇಸು ದಾಖಲಾದಾಗ ಸಂತ್ರಸ್ತೆಯರಿಗೆ ಪರಿಹಾರದ ಮೊತ್ತ ಶೇ.25ರಷ್ಟುಹಾಗೂ ಔಷಧೋಪಚಾರದ ವೆಚ್ಚ ನೀಡಬೇಕು. ಚಾರ್ಜ್ ಶೀಟ್‌ ದಾಖಲಾದ ಕೂಡಲೇ ಶೇ.25ರಷ್ಟುಹಾಗೂ ಉಳಿದ ಶೇ.50ರಷ್ಟು ಪರಿಹಾರವನ್ನು ಕೇಸು ನ್ಯಾಯಾಲಯದಲ್ಲಿ ಇತ್ಯರ್ಥವಾದ ಕೂಡಲೇ ನೀಡುವಂತೆ ಕಾನೂನು ರೂಪಿಸಬೇಕು. ರಾಜ್ಯದಲ್ಲಿ ಪರಿಹಾರ ಪಡೆಯಲು ಅರ್ಹವಾದ ಹಲವು ಪ್ರಕರಣಗಳಿದ್ದರೂ ಕೇಂದ್ರ ಸರ್ಕಾರದ ನಿರ್ಭಯ ಪರಿಹಾರ ನಿಧಿಯನ್ನು ರಾಜ್ಯ ಸರ್ಕಾರ ಇಲ್ಲಿಯವರೆಗೂ ಬಳಸಿಕೊಂಡಿಲ್ಲ. ಮುಂದೆಯಾದರೂ ಅದನ್ನು ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ದೇಹಶಾಸ್ತ್ರ ಶಿಕ್ಷಣ:

ಲೈಂಗಿಕ ಕ್ರಿಯೆಗಳಿಂದ ಆಗುವ ಪರಿಣಾಮ ಮತ್ತು ದುಷ್ಪರಿಣಾಮಗಳ ವಿಚಾರವಾಗಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ದೇಹಶಾಸ್ತ್ರ ಶಿಕ್ಷಣ ಅಳವಡಿಸುವುದು. ಪ್ರಾಥಮಿಕ ಶಾಲೆಯಿಂದಲೇ ಪಠ್ಯಗಳಲ್ಲಿ ಅಂಗ ಸಮಾನತೆಯನ್ನು ಬೋಧಿಸಲು ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣಗಳ ತನಿಖೆ ಮಾಡಲು ವಿಶೇಷ ಪೊಲೀಸ್‌ ಠಾಣೆಗಳನ್ನು ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದು ವರ್ಷದೊಳಗೆ ಪ್ರಾರಂಭಿಸಬೇಕು. ಆ ಠಾಣೆಗಳಿಗೆ ಕಾನೂನು ಪದವಿ ಪಡೆದ ಮಹಿಳಾ ಪೊಲೀಸ್‌ ಅಧಿಕಾರಿಗಳು, ಮಹಿಳಾ ಪೇದೆಗಳನ್ನೇ ನೇಮಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.

ಪ್ರತಿ ಪಂಚಾಯತಿ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಮಹಿಳಾ ದೂರು ಕೇಂದ್ರಗಳನ್ನು ತೆರೆಯಬೇಕು. ಗುಜ್ಜಾರ್‌ ಮದುವೆಗಳನ್ನು ನಿಯಂತ್ರಿಸಲು ಹಾಗೂ ಮದುವೆಯಾಗಿ ಹೋದ ಹೆಣ್ಣುಮಕ್ಕಳ ರಕ್ಷಣೆ ಮಾಡಲು ಸೂಕ್ತ ಕಾನೂನು ರೂಪಿಸಬೇಕು. ಪಿ.ಜಿ. (ಪೇಯಿಂಗ್‌ ಗೆಸ್ಟ್‌) ಕೇಂದ್ರಗಳಲ್ಲಿ ದೌರ್ಜನ್ಯ, ಅತ್ಯಾಚಾರ ಕೃತ್ಯಗಳು ನಡೆದರೆ ಕೃತ್ಯ ಎಸಗಿದವರು ಹಾಗೂ ಪಿ.ಜಿ. ಕೇಂದ್ರಗಳ ಮಾಲೀಕರು ಅಪರಾಧಿಗಳೆಂದು ಪರಿಗಣಿಸಬೇಕು. ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಬೇಕು. ಐಟಿಬಿಟಿ ಕಂಪನಿಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗಾಗಿ ಆಂತರಿಕ ದೂರು ಸಮಿತಿ ರಚಿಸಬೇಕು. ವಾಹನ ಚಾಲಕರಿಂದ ಕೃತ್ಯ ನಡೆದರೆ ಆತನೊಂದಿಗೆ ವಾಹನಗಳ ಮಾಲೀಕರನ್ನು ಹೊಣೆ ಮಾಡಬೇಕು. ಶಾಲಾ-ಕಾಲೇಜು, ದೇವಸ್ಥಾನ, ಚರ್ಚ್, ಮಸೀದಿ, ಆಸ್ಪತ್ರೆಗಳು, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಿಂದ ಕನಿಷ್ಠ ಅರ್ಧ ಕಿ.ಮೀ. ಆಸುಪಾಸಿನಲ್ಲಿ ಹೆಂಡದಂಗಡಿ ಹಾಗೂ ಬಾರ್‌ಗಳು ಇರದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಲವ್‌ ಮ್ಯಾರೇಜ್‌'ಗೆ ಒಪ್ಪದ ಪೋಷಕರಿಗೆ ಶಿಕ್ಷೆ

ಮರ್ಯಾದೆ ಹೆಸರಿನಲ್ಲಿ ನಡೆಯುವ ಹತ್ಯೆಗಳ ತಡೆ ಅವಶ್ಯಕವಾಗಿದ್ದು, ಅನ್ಯಜಾತಿ-ಅನ್ಯ ಧರ್ಮಗಳಿಗೆ ಸೇರಿದ ಯುವಕ ಯುವತಿಯರು ಪ್ರೀತಿಸಿ ಮದುವೆಯಾಗಲು ಮುಂದಾದಾಗ ರಕ್ಷಣೆ ಕೊಡದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಲು ನಿಯಮ ರೂಪಿಸಬೇಕು. ವಯಸ್ಕರ ಪ್ರೇಮ ವಿವಾಹಕ್ಕೆ ವಿರೋಧಿಸುವ ಪೋಷಕರು ಮತ್ತು ಇನ್ನಿತರರನ್ನು ಶಿಕ್ಷಾರ್ಹರೆಂದು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಲು ಕಾನೂನು ರೂಪಿಸಬೇಕು. ವಸತಿ ಶಾಲೆಗಳಲ್ಲಿ ಶುಲ್ಕ ನಿಗದಿ ಮಾಡಲು ರಾಜ್ಯ ಮಟ್ಟದಲ್ಲಿ ನಿವೃತ್ತ ಹೈಕೋರ್ಟಿನ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಶುಲ್ಕವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ಕಾನೂನು ರೂಪಿಸಬೇಕು.

ಕೇಂದ್ರಕ್ಕೆ ಶಿಫಾರಸು

ತಜ್ಞರ ಸಮಿತಿ ನೀಡಿದ ಅಂತಿಮ ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವರದಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ಕೇವಲ ರಾಜ್ಯಕ್ಕೆ ಸೀಮಿತವಲ್ಲ. ಇದು ರಾಷ್ಟ್ರವ್ಯಾಪಿ ಇರುವ ಸಮಸ್ಯೆಯಾಗಿದೆ. ಅತ್ಯಾಚಾರ, ದೌರ್ಜನ್ಯ ತಡೆಗೆ ರಾಷ್ಟ್ರೀಯ ನೀತಿ ರೂಪಿಸುವ ಕುರಿತು ಕೇಂದ್ರ ಸರ್ಕಾರಕ್ಕೂ ವರದಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರ ತಡೆಯಲು ರಾಷ್ಟ್ರೀಯ ನೀತಿ ರೂಪಿಸಬೇಕು. ಮಕ್ಕಳು ಮತ್ತು ಮಹಿಳೆಯರು ಸೇರಿ ಶೇ.70ರಷ್ಟುಜನಸಂಖ್ಯೆ ಇದ್ದು, ಅವರ ಮೇಲೆ ನಡೆಯುವ ದೌರ್ಜನ್ಯಗಳ ನಿವಾರಣೆಗಾಗಿ ಪೊಲೀಸ್‌, ವೈದ್ಯಕೀಯ, ಪ್ರಾಸಿಕ್ಯೂಷನ್‌, ನ್ಯಾಯಾಲಯ ಇನ್ನಿತರೆ ಜವಾಬ್ದಾರಿಯುತ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳ ಕುರಿತು ಶೀಘ್ರ ಗತಿಯಲ್ಲಿ ತನಿಖೆ ನಡೆಸಿ, ಚಾಜ್‌ರ್‍ಶೀಟ್‌ಗಳನ್ನು ದಾಖಲು ಮಾಡಿ ಕೇಸುಗಳು ಒಂದು ವರ್ಷದೊಳಗೆ ಇತ್ಯರ್ಥವಾಗುವಂತೆ ಸರ್ಕಾರ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕೆಂದು ತಿಳಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿ ವರ್ಷವೂ ಕನಿಷ್ಠ ನೂರಾರು ಆತ್ಮಹತ್ಯೆಗಳು ಹಾಗೂ ಕೊಲೆಗಳು ನಡೆಯುತ್ತಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಬಹುತೇಕ ಪ್ರಕರಣಗಳು ಮಹಿಳೆಯರ ಆತ್ಮಹತ್ಯೆಗಳು ಹಾಗೂ ಕೊಲೆಗಳು ಎಂದು ಸಂಬಂಧಿಸಿದ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಸಮಿತಿಯ ಗಮನಕ್ಕೆ ತಂದಿದ್ದಾರೆ. ಇಂತಹ ಅಕಾಲಿಕ ಸಾವುಗಳನ್ನು ತಡೆಯಲು ಜನ ಜಾಗೃತಿ ಮೂಡಿಸಬೇಕು. ವಿಶೇಷ ಪೊಲೀಸ್‌ ದಳವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರ ನೇಮಕ ಮಾಡಬೇಕು. ಮನೆಗೆಲಸದ ಮಹಿಳೆಯರು ಕಾರ್ಮಿಕ ಇಲಾಖೆಯಡಿಯಲ್ಲಿ ನೋಂದಣಿ ಕಡ್ಡಾಯವಾಗುವಂತೆ ಕ್ರಮ ಕೈಗೊಳ್ಳಬೇಕು. ಹೀಗೆ ಸುಮಾರು 135 ಶಿಫಾರಸುಗಳನ್ನು ಅಂತಿಮ ವರದಿಯಲ್ಲಿ ಮಾಡಲಾಗಿದೆ ಎಂದರು.

 

loader