ನವದೆಹಲಿ[ಆ.12]: ಟೋಕಿಯೋ ಒಲಿಂಪಿಕ್ಸ್‌ಗೂ ಮೊದಲು ಶೂಟಿಂಗ್ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. 2020ರಲ್ಲಿ ನವದೆಹಲಿಯಲ್ಲಿ ವಿಶ್ವಕಪ್ ನಡೆಯಲಿದ್ದು, ವೇಳಾಪಟ್ಟಿ ಸದ್ಯದಲ್ಲೇ ಪ್ರಕಟಗೊಳ್ಳಲಿದೆ. 

ಇದು ಸಂಯೋಜಿತ ವಿಶ್ವಕಪ್ ಆಗಿರಲಿದ್ದು ರೈಫಲ್, ಪಿಸ್ತೂಲ್ ಹಾಗೂ ಶಾಟ್‌ಗನ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಶನಿವಾರ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಷನ್(ಐಎಸ್‌ಎಸ್‌ಎಫ್) ತಿಳಿಸಿತು. ಆಸ್ಟ್ರಿ ಯಾದ ವಿಯೆನ್ನಾದಲ್ಲಿ ನಡೆದ ಐಎಸ್‌ಎಸ್‌ಎಫ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ ಅಧ್ಯಕ್ಷ ರಣ್‌ಧೀರ್ ಸಿಂಗ್‌ಗೆ ಆತಿಥ್ಯದ ವಿಷಯ ತಿಳಿಸಲಾಯಿತು. 

2012ರ ಬಳಿಕ ಭಾರತದಲ್ಲಿ ನಡೆಯುತ್ತಿರುವ ಬಹುರಾಷ್ಟ್ರ ಶೂಟಿಂಗ್ ಟೂರ್ನಿ ಇದಾಗಿದೆ. ‘ನಮ್ಮ ಮೇಲೆ ನಂಬಿಕೆಯಿಟ್ಟು ಮತ್ತೊಮ್ಮೆ ವಿಶ್ವಕಪ್ ಆತಿಥ್ಯಕ್ಕೆ ಅವಕಾಶ ನೀಡಿದ ಐಎಸ್‌ಎಸ್ಎಫ್‌ಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ’ ಎಂದು ರಣ್‌ಧೀರ್ ಸಿಂಗ್ ಹೇಳಿದ್ದಾರೆ.